ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 ರ ಮಿಜಾರಿನಲ್ಲಿ ಬೈಕೊಂದು ರಸ್ತೆಯ ಹೊಂಡಕ್ಕೆ ಬಿದ್ದು ಸವಾರ ಮೃತಪಟ್ಟ ಘಟನೆ ಶುಕ್ರವಾರ (ಜೂ.06)ರಾತ್ರಿ ನಡೆದಿದೆ.
ಮೃತಪಟ್ಟ ವ್ಯಕ್ತಿ ಗಂಜಿಮಠ ನಿವಾಸಿ ಅಬ್ದುಲ್ ಖಾದರ್(69) ಎಂದು ಗುರುತಿಸಲಾಗಿದೆ.
ಅಬ್ದುಲ್ ಖಾದರ್ ನಿನ್ನೆ ರಾತ್ರಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹೊಂಡಕ್ಕೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಅಪೂರ್ಣ ಸ್ಥಿತಿಯಲ್ಲಿದ್ದು, ಚರಂಡಿಗೆ ಅಡ್ಡವಾಗಿ ಹೊಂಡ ತೋಡಿ ಅದಕ್ಕೆ ಕಾಂಕ್ರೀಟ್ ಬೆಡ್ಡಿಂಗ್ ಹಾಕಲಾಗಿದೆ. ಆದರೆ ಅಲ್ಲಿ ಯಾವುದೇ ಸೂಚನಾ ಫಲಕವನ್ನು ಅಳವಡಿಸಲಾಗದ ಕಾರಣ ಅಲ್ಲೊಂದು ಹೊಂಡ ಇರುವುದು ರಾತ್ರಿ ವೇಳೆ ಯಾರ ಗಮನಕ್ಕೂ ಬಂದಿಲ್ಲ.
ಕಳೆದ ತಿಂಗಳಿಂದ ಮೂವರು ಈ ಹೊಂಡಕ್ಕೆ ಬಿದ್ದಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವೈಜ್ಞಾನಿಕ ರಸ್ತೆ ಕಾಮಗಾರಿ ಈ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.



