Breaking
27 Jul 2026, Mon

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ), ಮಿಜಾರು ವತಿಯಿಂದ 75ನೇ ಮಾಸಿಕ ಸೇವಾಯೋಜನೆ ಹಸ್ತಾಂತರ

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ), ಮಿಜಾರು, ದಕ್ಷಿಣ ಕನ್ನಡ, ಕರ್ನಾಟಕ ಇದರ 75ನೇ ಮಾಸಿಕ ಸೇವಾಯೋಜನೆಯ ಅಂಗವಾಗಿ ಅಪಘಾತಕ್ಕೊಳಗಾದ ಸಂಧೀಶ್ ಶೆಟ್ಟಿ ಅವರಿಗೆ ಆರ್ಥಿಕ ಸಹಾಯ ಹಸ್ತಾಂತರಿಸಲಾಯಿತು.


ಕಾರ್ಕಳ ತಾಲೂಕಿನ ಹೆರ್ಮುಂಡೆ ನಿವಾಸಿಯಾಗಿರುವ 28 ವರ್ಷದ ಸಂಧೀಶ್ ಶೆಟ್ಟಿ ಅವರು 24/10/2025ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೂಡುಬಿದಿರೆಯ ಒಳರಸ್ತೆಯಲ್ಲಿ ಸಂಭವಿಸಿದ ಲಾರಿ ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದ ಪರಿಣಾಮವಾಗಿ ಮೆದುಳಿನ ರಕ್ತಸ್ರಾವ ಹಾಗೂ ಬೆನ್ನುಹುರಿ (Spinal Cord) ಗಾಯಕ್ಕೆ ಒಳಗಾಗಿ ಸೊಂಟದ ಕೆಳಭಾಗದ ಸ್ವಾಧೀನ ಕಳೆದುಕೊಂಡಿದ್ದು, ಪ್ರಸ್ತುತ ನಡೆದಾಡಲು ಅಸಹಾಯಕರಾಗಿದ್ದಾರೆ.


ಅವರು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಬಳಿಕ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ನಂತರ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಚಿಕಿತ್ಸೆ ಮುಂದುವರಿಸಿದ್ದು, ಬಳಿಕ ಬೆನ್ನುಮೂಳೆ ಗಾಯಕ್ಕೊಳಗಾದವರಿಗಾಗಿ ಇರುವ ತೀವ್ರ ನಿಗಾ ಚಿಕಿತ್ಸಾ ಕೇಂದ್ರದಲ್ಲಿ ಮೂರು ತಿಂಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದಾರೆ.


ಈವರೆಗೆ ಚಿಕಿತ್ಸೆಗೆ ಸುಮಾರು 12 ಲಕ್ಷ ರೂಪಾಯಿ ವೆಚ್ಚವಾಗಿದ್ದು, ನುರಿತ ವೈದ್ಯರ ಸಲಹೆಯಂತೆ ಇದೀಗ ಬೆಂಗಳೂರಿನ ಸಕ್ರಾ ಆಸ್ಪತ್ರೆಯಲ್ಲಿ ರೋಬೋಟಿಕ್ ಥೆರಪಿ (Robotic Therapy) ಪಡೆಯುವ ಅಗತ್ಯವಿದೆ. ಈ ಚಿಕಿತ್ಸೆಗೆ ಮೂರು ತಿಂಗಳಿಗೆ ಅಂದಾಜು 19,50,000 ರೂಪಾಯಿ ವೆಚ್ಚವಾಗಲಿದ್ದು, ಸಹಾಯ ಮಾಡುವಂತೆ ಸಂಧೀಶ್ ಶೆಟ್ಟಿ ಅವರ ಅಣ್ಣ ಮನವಿ ಮಾಡಿದ್ದರು.


ಈ ಮನವಿಗೆ ಸ್ಪಂದಿಸಿದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ವತಿಯಿಂದ 15,000 ರೂಪಾಯಿಗಳ ಚೆಕ್ಕನ್ನು ಶ್ರೀ ಆದಿಶಕ್ತಿ (ಮಾರಿಗುಡಿ) ದೇವಸ್ಥಾನ, ಮೂಡುಬಿದಿರೆಯ ಆಡಳಿತ ಮೋಕ್ತೇಸರರಾದ ರಾಜಮೋಹನ್ ಶೆಟ್ಟಿ ಅವರ ಹಸ್ತಾಂತರದ ಮೂಲಕ ನೀಡಲಾಯಿತು.


ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರು, ಟ್ರಸ್ಟ್ನ ಸಂಸ್ಥಾಪಕರಾದ ನವೀನ್ ಪಿ. ಮಿಜಾರು, ಕಾರ್ಯದರ್ಶಿ ದಯಾನಂದ ಉರ್ಕಿ, ಸೇವಾ ಮಾಣಿಕ್ಯ ಸುಮಂತ್ ಸುವರ್ಣ ಹಾಗೂ ಬಡಗ ಮಿಜಾರು ಉಪಸ್ಥಿತರಿದ್ದರು.
ಈ ಸೇವಾಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಟ್ರಸ್ಟ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *