ಪುತ್ತೂರು: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಎಂಟ್ರಿ ಕೊಡುತ್ತಿರುವ ವಿಚಾರಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಸಂಘಟನೆಯ ಕಾರ್ಯಕರ್ತರು, ಸಾಕಷ್ಟು ಜನಪ್ರತಿನಿಧಿಗಳು ಅಸಮಾಧಾನಗಳನ್ನು ಹೊರಹಾಕುತ್ತಿದ್ದಾರೆ.

ಇತ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಹಿರಿ ಜೀವವನ್ನು ಬಿಟ್ಟಿಲ್ಲ ಅನ್ನುವ ಆರೋಪವೊಂದು ಕೇಳಿ ಬಂದಿದೆ.ಹೌದು ಪುತ್ತೂರಿನ ನಿವಾಸಿಯಾಗಿರುವ ವಿಶ್ವ ಹಿಂದೂ ಪರಿಷತ್ ನ ದಕ್ಷಿಣ ಪ್ರಾಂತ್ಯದ ಉಪಾಧ್ಯಕ್ಷರಾಗಿರುವ 80 ವರ್ಷದ ಯು ಪೂವಪ್ಪರವರು ರಾಘವೇಂದ್ರ ಮಠದಲ್ಲಿ ಭಾನುವಾರ ರಾತ್ರಿ ಮಲಗಿದ್ರು.
ಈ ವೇಳೆ ಅಲ್ಲಿಗೆ ಆಗಮಿಸಿದ ಪೊಲೀಸರು ನಿಮ್ಮ ಫೋಟೊ ತೆಗೆಯಬೇಕೆಂದು ಹೇಳಿದ್ದಾರೆ. ಆಗ ಪೊಲೀಸರಿಗೆ ಪೂವಪ್ಪ ಅವರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಪೊಲೀಸರು ಮೇಲಾಧಿಕಾರಿಗಳ ಆದೇಶ ಇದೆ ಹಾಗಾಗಿ ಫೋಟೊ ತೆಗೆಯಲಾಗುತ್ತಿದೆ ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯು ಪೂವಪ್ಪ ರವರು ನನ್ನ ಫೋಟೊ ತೆಗೆದು ಯಾವ ಪ್ರಯೋಜನವಿಲ್ಲ. ಮೊದಲು ಎರಡೂ ಸಮುದಾಯವನ್ನ ಒಟ್ಟು ಸೇರಿಸಿ ಮಾತುಕತೆ ಮಾಡಿ. ದ.ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮಾತುಕತೆ ನಡೆಸಿ.
ಅದು ಬಿಟ್ಟು ನಮ್ಮ ಫೋಟೊ ತೆಗೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ನನಗೆ 80 ವರ್ಷ ಆಯಿತು. ಇನ್ನು ನಾನು ಹೋಗಿ ಗಲಾಟೆ ಮಾಡ್ಲಿಕೆ ಸಾಧ್ಯ ಆಗುತ್ತಾ? ವಿಚಾರಣೆ ಹಿಂದೂಗಳಿಗೆ ಮಾತ್ರ ಆದ್ರೆ ಕಷ್ಟ, ಬದಲಾಗಿ ಎರಡೂ ಕಡೆಯವರನ್ನ ಕರೆದು ವಿಚಾರಿಸಿ. ಸಾಧ್ಯ ಆಗುವುದಾದ್ರೆ ಎರಡೂ ಸಮುದಾಯವನ್ನ ಒಟ್ಟು ಸೇರಿಸಿ ವಿಚಾರಣೆ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದು ಹಿರಿ ಜೀವ ಹೇಳಿದ್ದಾರೆ.

ಪೂವಪ್ಪ ಅವರು ಈ ವೇಳೆ ಟವಲ್ ಸುತ್ತಿಕೊಂಡಿದ್ದು ಅದೇ ಬಟ್ಟೆಯಲ್ಲಿ ಪೊಲೀಸರು ಫೋಟೊ ತೆಗೆದುಕೊಂಡು ಹೋಗಿದ್ದಾರೆ ಎಂದರು.

