ಪುತ್ತೂರು: ತುಳು ಎಂಬುದು ಭಾಷೆ ಮಾತ್ರವಲ್ಲ. ಅದೊಂದು ಸಂಸ್ಕೃತಿ. ತುಳು ಮೂಲ ಜನಾಂಗದಲ್ಲಿ ಸತ್ಯ, ಧರ್ಮ ಮತ್ತು ನಿಷ್ಠೆಯಿದೆ. ಇಲ್ಲಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಹಿಂಸೆಗಳು ತುಳು ಸಂಸ್ಕೃತಿಯಲ್ಲ. ಹೊರ ಸಂಸ್ಕೃತಿಯ ಆಗಮನದಿಂದ ಇಂತಹ ಕೃತ್ಯಗಳು ನಡೆಯುತ್ತಿದೆ. ಬೇರೆಯವರು ಇಲ್ಲಿಗೆ ಆಗಮಿಸಿ ನಮ್ಮ ತುಳು ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ಎವಿಜಿ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅಭಿಪ್ರಾಯ ಪಟ್ಟರು.

ಸಿರಿಗಂಗೆ ಪ್ರಕಾಶ ತುಳುನಾಡು ಇದರ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಸಹಕಾರದಲ್ಲಿ ಶ್ರೀಶಾವಾಸವಿ ತುಳುನಾಡ್(ವಿದ್ಯಾಶ್ರೀ) ಅವರು ಬರೆದ ಗೇನೊದ ಬುಲೆ" ತುಳು ಬರವುದ ಮುಡಿ(ಲೇಖನ ಮಾಲೆ) ಕೃತಿ ಬಿಡುಗಡೆ ಹಾಗೂಹರನೂರ ದಾರಿ’ ಶಿವ ದೇವೆರೆ ಪದೊತ್ತ ಲಿರಿಕಲ್(ವೀಡಿಯೋ) ಬಿಡುಗಡೆ ಸಮಾರಂಭವು ಶುಕ್ರವಾರ ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಿತು.

ಈ ವೇಳೆ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವೆಂಕಟ್ರಮಣ ಗೌಡ ಕಳುವಾಜೆ ಅವರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಬೆಳವಣಿಗೆಯು ಕಷ್ಟವಿದೆ. ಅವರಿಗೆ ಅವಕಾಶಗಳು ಲಭ್ಯವಾಗುವುದು ಕಡಿಮೆ. ಅದರ ನಡುವೆ ಸಣ್ಣ ಪ್ರಾಯದಲ್ಲಿ ಶ್ರೀವಿದ್ಯಾ ಅವರು ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ಅವರನ್ನು ಎಲ್ಲರೂ ಬೆಂಬಲಿಸಬೇಕಾಗಿದೆ ಎಂದರು.
ತುಳು ನಾಡಿನ ಕಂಬಳವು ಕೇವಲ ಕೋಣಗಳನ್ನು ಓಡಿಸುವ ಕ್ರೀಡೆ ಮಾತ್ರವಲ್ಲ. ಕಂಬಳ ನಮ್ಮ ಅನ್ನದ ಬಟ್ಟಲು, ಕಂಬಳವೇ ನಮ್ಮ ದೇವರು ಎಂದ ಅವರು ಶಿಕ್ಷಣದ ಕೊರತೆ ಮತ್ತು ಪ್ರೋತ್ಸಾಹದ ಕೊರತೆಯಿಂದಾಗಿ ತುಳುಮೂಲ ಜನಾಂಗವು ಸಂಕಷ್ಟ ಅನುಭವಿಸುಂತಾಗಿದೆ ಎಂದರು.

ಹರನೂರ ದಾರಿ ಕವನದ ವೀಡಿಯೋ ಬಿಡುಗಡೆಗೊಳಿಸಿದ ನಿವೃತ್ತ ಶಿಕ್ಷಕಿ ಶಂಕರಿ ಪಟ್ಟೆ ಮಾತನಾಡಿ ಹಿಂದೆಲ್ಲಾ ಶಾಲೆಗಳಲ್ಲಿ ತುಳು ಮಾತನಾಡುವುದು ತಪ್ಪಾಗುತ್ತಿತ್ತು. ಈಗ ಶಾಲೆಗಳಲ್ಲಿ ತುಳು ಪಠ್ಯ ವ್ಯವಸ್ಥೆ ಆರಂಭಗೊAಡಿದೆ. ಇದು ತುಳು ಭಾಷಾ ಬೆಳವಣಿಗೆಗೆ ಪೂರಕವಾಗಿದೆ. ಕಿರಿ ವಯಸ್ಸಿನ ಶ್ರೀವಾಸವಿ ಹಿರಿ ಕವಿಗಳಿಗೆ ಸಮಾನವಾಗಿ ಕವನ ಬರೆದಿದ್ದಾರೆ ಎಂದರು.

ಸಾಮಾಜಿಕ ಕಾರ್ಯಕರ್ತ ಹಾಗೂ ಪಂಚಾಯತ್ ರಾಜ್ ತಜ್ಞ ವಿಲ್ಫ್ರೆಡ್ ಡಿಸೋಜ ಮಾತನಾಡಿ ಸಾಹಿತ್ಯ, ಲೇಖನಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ತುಳು ನಾಡಿನಲ್ಲಿ ಹಲವು ಪ್ರಾದೇಶಿಕ ಮಾತ್ರ್ ಭಾಷೆಯನ್ನು ಮಾತನಾಡುವವವರು ಇದ್ದರೂ ಎಲ್ಲರೂ ತುಳು ಮಾತನಾಡುತ್ತಾರೆ. ಕೊಂಕಣಿ, ಬ್ಯಾರಿ ಭಾಷೆಗಳಿಗೆ ಲಿಪಿ ಇಲ್ಲದ ಕಾರಣ ಅದನ್ನು ಕನ್ನಡದಲ್ಲಿಯೇ ಬರೆಯುತ್ತಾರೆ. ಜೊತೆಗೆ ಇಂದು ಬಿಡುಗಡೆಯಾದ ಪುಸ್ತಕಗಳ ಸಹಿತ ಹಲವು ತುಳು ಕೃತಿ, ಲೇಖನಗಳು ಕನ್ನಡದಲ್ಲಿಯೇ ಬರೆಯಲಾಗುತ್ತಿದೆ. ಇದರೊಂದಿಗೆ ಇದೀಗ ಶಾಲೆಯಲ್ಲಿ ತುಳು ಪಠ್ಯ ಇರುವುದು ಭಾಷಾ ಬೆಳವಣಿಗೆಯಲ್ಲಿ ಉತ್ತಮವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಿದ್ದೀಕ್ ನಿರಾಜೆ ಮಾತನಾಡಿ ಶ್ರೀವಾಸವಿ ಅವರ ಕ್ರಿಯಾಶೀಲತೆ ಅದ್ಭುತವಾಗಿದ್ದು, ಅವರು ನಮ್ಮ ಸಂಘದ ಸದಸ್ಯೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇದೀಗ ಪ್ರೌಢ ಶಾಲೆಗಳಲ್ಲಿ ತುಳು ಪಠ್ಯವಿದೆ. ಮುಂದೆ ಪ್ರಾಥಮಿಕ ಶಾಲೆಗಳಲ್ಲಿಯೂ ತುಳು ಪಠ್ಯವನ್ನು ಅಳವಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.
ಪೂವರಿ ಪತ್ರಿಕೆಯ ಸಂಪಾದಕ ವಿಜಯ ಕುಮಾರ್ ಹೆಬ್ಬಾರಬೈಲು ಕೃತಿ ಪರಿಚಯ ಮಾಡಿದರು. ವಕೀಲೆ ಹರೀಣಾಕ್ಷಿ ಜೆ ಶೆಟ್ಟಿ ಕೃತಿಕಾರರ ಪರಿಚಯ ಮಾಡಿದರು. ಕೃತಿಕಾರೆ ಶ್ರೀಶಾವಾಸವಿ(ಶ್ರೀವಿದ್ಯಾ) ಅನುಭವ ಹಂಚಿಕೆ ಮಾಡಿಕೊಂಡರು. ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಕಾರ್ಯಕ್ರಮ ನಿರೂಪಿಸಿದರು.


