ಮಾಣಿ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ, ಏಮಾಜೆಯಲ್ಲಿ ಆಟಿ ತಿಂಗಳ ಸಂಭ್ರಮವನ್ನು ಪ್ರತಿಬಿಂಬಿಸುವ ‘ಆಟಿ ಐಸಿರಿ’ ಕಾರ್ಯಕ್ರಮ ಗುರುವಾರ ಆಚರಿಸಲಾಯಿತು.

ಕಾರ್ಯಕ್ರಮವನ್ನು ಬಾಲಕೃಷ್ಣ ಮೂಲ್ಯರವರು ಸಾಂಪ್ರದಾಯಿಕ ಚೆನ್ನೆಮಣೆ ಆಟಕ್ಕೆ ಕಾಯಿ ಹಾಕುವ ಮೂಲಕ ಉದ್ಘಾಟಿಸಿದರು. ಬಳಿಕ ಆಟಿ ತಿಂಗಳ ವಿಶೇಷ ಸಾಂಪ್ರದಾಯಿಕ ಖಾದ್ಯವನ್ನು ಎಲ್ಲರಿಗೂ ಉಣಬಡಿಸಲಾಯಿತು.

ನಂತರ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಚೆನ್ನೆಮಣೆ ಆಟ ನಡೆದರೆ, ಪೋಷಕರಿಗಾಗಿ ತಟ್ಟಿ ಹೆಣೆಯುವುದು,ಹಿಡಿಸುಡಿ ತಯಾರಿ ಸ್ಪರ್ಧೆ ಮತ್ತು ತೆಂಗಿನ ಗರಿಯಿಂದ ವಿನ್ಯಾಸ ರಚನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೆಂಗಿನ ಗರಿಯಿಂದ ತಯಾರಿಸಿದ ವಿವಿಧ ವಿನ್ಯಾಸಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಜನಪದ ಪರಂಪರೆಯ ಬಗ್ಗೆ ಅರಿವು ಹಾಗೂ ಅಭಿಮಾನವನ್ನು ಬೆಳೆಸುತ್ತವೆ ಎಂದುರು.

ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ಸ್ವಾಗತಿಸಿದರು. ಶಿಕ್ಷಕ ಉದಯ ಚಂದ್ರ ಕೆ. ಎಸ್. ವಂದಿಸಿದರು. ಗೌರವ ಶಿಕ್ಷಕಿ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು. ಐಸಮ್ಮ ಸಹಕರಿಸಿದರು.

ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಆಟಿ ಐಸಿರಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು.


