ಮಣಿಪಾಲದ ಈಶ್ವರನಗರದ ರಾಷ್ಟ್ರೀಯ ಹೆದ್ದಾರಿ 169Aರ ಇಳಿಜಾರು ಪ್ರದೇಶದಲ್ಲಿ ಗುರುವಾರ ರಾತ್ರಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ನಗರಸಭೆಯ ಕುಡಿಯುವ ನೀರಿನ ಪಂಪ್ಹೌಸ್ ಎದುರು ಪಲ್ಟಿಯಾದ ಘಟನೆ ನಡೆದಿದೆ.

ಮುಖ್ಯ ರಸ್ತೆಯಲ್ಲಿರುವ ತೀವ್ರ ಹಾಗೂ ಏಕಾಏಕಿ ಬರುವ ತಿರುವಿನಿಂದಾಗಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ, ಇದೇ ತಿರುವಿನಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿದ್ದು, ರಸ್ತೆಯ ವಿನ್ಯಾಸವೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಇಳಿಜಾರು ಪ್ರದೇಶವಾಗಿರುವುದರಿಂದ ಅಳವಡಿಸಿರುವ ಎಚ್ಚರಿಕೆ ಸೂಚನಾ ಫಲಕಗಳು ವಾಹನ ಸವಾರರಿಗೆ ಸಮರ್ಪಕವಾಗಿ ಗೋಚರಿಸುತ್ತಿಲ್ಲ. ಏಕಾಏಕಿ ಎದುರಾಗುವ ತಿರುವಿನಿಂದ ಅನೇಕ ಚಾಲಕರು ನಿಯಂತ್ರಣ ಕಳೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಅಪಾಯದ ತಿರುವಿನಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಿ, ರಸ್ತೆ ವಿನ್ಯಾಸ ಸುಧಾರಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಘಟನೆ ಕುರಿತು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


