ಹೆಬ್ರಿ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರ ಉರುಳಿಬಿದ್ದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೆಬ್ರಿ ಸಮೀಪದ ಹುತ್ತುರ್ಕೆ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.

ಶುಕ್ರವಾರ ಸಂಜೆ ಸುಮಾರು 5.30ರ ವೇಳೆಗೆ ಕಾರು ಹೆಬ್ರಿಯಿಂದ ಬ್ರಹ್ಮಾವರದತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರಸ್ತೆಯ ಬದಿಯಲ್ಲಿದ್ದ ಬೃಹತ್ ಮರವೊಂದು ಏಕಾಏಕಿ ಬೇರು ಸಮೇತ ರಸ್ತೆಗೆ ಉರುಳಿಬಿದ್ದಿದೆ. ಇದೇ ವೇಳೆ ಮರದೊಂದಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ತಂತಿಗಳೂ ಕಾರಿನ ಮೇಲೆ ಬಿದ್ದಿವೆ.
ಮರ, ವಿದ್ಯುತ್ ಕಂಬ ಹಾಗೂ ತಂತಿಗಳ ಅಡಿಯಲ್ಲಿ ಕಾರು ಸಂಪೂರ್ಣವಾಗಿ ಸಿಲುಕಿಕೊಂಡಿದ್ದು, ಅದರಲ್ಲಿದ್ದ ಚಾಲಕ ಗಂಭೀರವಾಗಿ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ಉರುಳಿಬಿದ್ದ ಮರ ಹಾಗೂ ವಿದ್ಯುತ್ ಕಂಬವನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. ಮೃತ ಚಾಲಕರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




