Breaking
23 Sep 2026, Wed

ಉಡುಪಿ: ಮುದರಂಗಡಿ ಶೂಟೌಟ್‌ ಪ್ರಕರಣ; ಆರೋಪಿಗೆ ಕಾಲಿಗೆ ಗುಂಡೇಟು, ಪೊಲೀಸರ ವಶಕ್ಕೆ

ಉಡುಪಿ: ಜಿಲ್ಲೆಯ ಮುದರಂಗಡಿ ಪೇಟೆಯಲ್ಲಿ ಶುಕ್ರವಾರ (ಆ.07) ಸಂಜೆ ಉದ್ಯಮಿ ಡೇವಿಡ್‌ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಆರೋಪಿಯ ಕಾಲಿಗೆ ಗುಂಡು ಹಾರಿಸಿರುವ ಘಟನೆ ನಡೆದಿದೆ.

ಕಾಪು ಪಿಎಸ್ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ, ಬೈಂದೂರು ಸಮೀಪದ ಒತ್ತಿನೆಣೆಯಲ್ಲಿ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಪಿಎಸ್ಐ ತೇಜಸ್ವಿ ತಮ್ಮ ಸರ್ವೀಸ್ ಪಿಸ್ತೂಲ್‌ನಿಂದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯಲ್ಲಿ ಪಿಎಸ್ಐ ತೇಜಸ್ವಿ ಅವರಿಗೂ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ?
ಶುಕ್ರವಾರ ಮಧ್ಯಾಹ್ನ 3.50ರ ಸುಮಾರಿಗೆ ಮುದರಂಗಡಿ ಚರ್ಚ್‌ ಎದುರು ಡೇವಿಡ್‌ ಡಿಸೋಜ (55) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಮುದರಂಗಡಿ–ಪಿಲಾರ್‌ಖಾನದಲ್ಲಿ ಪ್ರಿನ್ಸ್‌ ಪಾಯಿಂಟ್‌ ಉದ್ಯಮ ಸಂಸ್ಥೆ ಹೊಂದಿದ್ದ ಡೇವಿಡ್‌ ಅವರು ತಮ್ಮ ವಾಹನ ಏರಲು ಮುಂದಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಅತ್ಯಂತ ಸಮೀಪದಿಂದ ತಲೆಗೆ ಗುಂಡು ಹಾರಿಸಿದ್ದಾನೆ.

ಡೇವಿಡ್‌ ನೆಲಕ್ಕೆ ಬಿದ್ದ ಬಳಿಕವೂ ಎದೆ ಭಾಗಕ್ಕೆ ಮತ್ತೆರಡು ಗುಂಡು ಹಾರಿಸಲಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದರು. ಬಳಿಕ ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಗುಂಡು ಹಾರಿಸಿದ ವ್ಯಕ್ತಿ ಕೈಯಲ್ಲಿ ಪಿಸ್ತೂಲ್ ಹಿಡಿದು ಬೈಕ್ ಏರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಮತ್ತೆರಡು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *