ಬೆಳ್ತಂಗಡಿ: ಪಡಿತರ ಚೀಟಿಯ ಕೆವೈಸಿ ಪೂರ್ಣಗೊಳಿಸಲು ಅ.20 ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಪಡಿತರ ಅಂಗಡಿಗಳಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿದೆ. ಕೆವೈಸಿಗಾಗಿ ಕುಟುಂಬ ಸದಸ್ಯರ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಬೇಕಾಗಿರುವುದರಿಂದ ತಾಲೂಕಿನ ಬೆರಳೆಣಿಕೆಯ ಆಧಾರ್ ಕೇಂದ್ರಗಳಲ್ಲೂ ನೂಕುನುಗ್ಗಲು ಉಂಟಾಗಿದೆ.

ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಕೆವೈಸಿಗಾಗಿ ಜನರು ಕುಟುಂಬ ಸಮೇತರಾಗಿ ಪಡಿತರ ಅಂಗಡಿಗಳಿಗೆ ಆಗಮಿಸುತ್ತಿದ್ದಾರೆ. ದಿನಕ್ಕೆ ಸುಮಾರು 30ರಿಂದ 40 ಕುಟುಂಬಗಳ ಕೆವೈಸಿ ನಡೆಯುತ್ತಿದ್ದರೂ, ಅಂಗಡಿಗಳ ಮುಂದೆ 150ರಿಂದ 200ಕ್ಕೂ ಅಧಿಕ ಮಂದಿ ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲು, ಮಳೆಯನ್ನೂ ಲೆಕ್ಕಿಸದೆ ಬೆಳಗ್ಗೆಯಿಂದ ಸಂಜೆವರೆಗೆ ಕಾಯಬೇಕಾಗಿದೆ.

ಕೆಲವು ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಅಪ್ಡೇಟ್ ಆಗದ ಕಾರಣ ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಸರ್ವರ್ ಸಮಸ್ಯೆಯಿಂದಲೂ ಹಲವು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗಿರುವುದರಿಂದ ಪಡಿತರ ವಿತರಣೆ ಕಾರ್ಯಕ್ಕೂ ಅಡಚಣೆ ಉಂಟಾಗುತ್ತಿದೆ.

ಆಧಾರ್ ಅಪ್ಡೇಟ್ ಅನಿವಾರ್ಯವಾಗಿರುವುದರಿಂದ ತಾಲೂಕಿನ ಕೆಲವೇ ಕೇಂದ್ರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಕೂಪನ್ ಪಡೆಯಬೇಕಾಗಿದೆ. ಒಂದು ಕೇಂದ್ರದಲ್ಲಿ ದಿನಕ್ಕೆ ಸುಮಾರು 20ರಿಂದ 25 ಮಂದಿಗೆ ಮಾತ್ರ ಆಧಾರ್ ಅಪ್ಡೇಟ್ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಹಾಗೂ ವೃದ್ಧರನ್ನು ಕರೆದುಕೊಂಡು ದೂರದ ಊರುಗಳಿಂದ ಬರುವವರು ಗಂಟೆಗಟ್ಟಲೆ ಕಾಯುವಂತಾಗಿದೆ. ಕೆಲವರಿಗೆ ಕೂಪನ್ ಸಿಗದೆ ವಾಪಸ್ ತೆರಳುವ ಪರಿಸ್ಥಿತಿಯೂ ಇದೆ.

ತಾಲೂಕಿನಲ್ಲಿ ಬ್ಯಾಂಕ್ ಆಫ್ ಬರೋಡ ಬೆಳ್ತಂಗಡಿ ಶಾಖೆ, ಬೆಳ್ತಂಗಡಿ ಅಂಚೆ ಕಚೇರಿ ಸೇರಿದಂತೆ ಗುರುವಾಯನಕೆರೆ, ವೇಣೂರು, ಕೊಯ್ಯೂರು ಹಾಗೂ ಧರ್ಮಸ್ಥಳ ಅಂಚೆ ಕಚೇರಿಗಳಲ್ಲಿ ಆಧಾರ್ ಅಪ್ಡೇಟ್ ಸೇವೆ ಲಭ್ಯವಿದೆ. ಗ್ರಾಮೀಣ ಭಾಗಗಳಲ್ಲಿ ಸರ್ವರ್ ಸಮಸ್ಯೆಯಿಂದ ದಿನಕ್ಕೆ 5ರಿಂದ 10 ಅಪ್ಡೇಟ್‌ಗಳನ್ನೂ ಪೂರ್ಣಗೊಳಿಸುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.

ತಾಲೂಕಿನ 81 ಗ್ರಾಮಗಳ ಜನರು ಲಭ್ಯವಿರುವ ಕೆಲವೇ ಆಧಾರ್ ಕೇಂದ್ರಗಳಿಗೆ ಆಗಮಿಸುತ್ತಿರುವುದರಿಂದ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳ ದೈನಂದಿನ ಕಾರ್ಯಗಳ ಮೇಲೂ ಒತ್ತಡ ಉಂಟಾಗಿದೆ.

ಪಡಿತರ ಚೀಟಿ ಕೆವೈಸಿಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಆಧಾರ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಆರಂಭಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಜಿಲ್ಲಾಡಳಿತ ಈ ಸಮಸ್ಯೆ ಬಗ್ಗೆ ತುರ್ತು ಗಮನಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


