Breaking
23 Sep 2026, Wed

ಸಂಕಷ್ಟದ ಬದುಕಿಗೆ ಮಾನವೀಯ ಸ್ಪರ್ಶ ನೀಡುವುದೇ ಗುರುತತ್ತ್ವದ ನಿಜವಾದ ಅನುಷ್ಠಾನ – ಡಾ. ತ್ರಿವೇಣಿ ರಮೇಶ್

ಮಾಣಿ: ಸಂಕಷ್ಟದಲ್ಲಿರುವವರ ಬದುಕಿಗೆ ಮಾನವೀಯ ಸ್ಪರ್ಶ ನೀಡುವುದೇ ಗುರುತತ್ತ್ವದ ನಿಜವಾದ ಅನುಷ್ಠಾನ. ನಾರಾಯಣ ಗುರುಗಳ ತತ್ವಗಳು ಸಮಾಜದ ಅಂಚಿನಲ್ಲಿರುವವರ ಬದುಕಿಗೆ ಸ್ಪಂದಿಸುವ ಮೂಲಕ ಅರ್ಥಪೂರ್ಣವಾಗುತ್ತವೆ. ಸಂಕಷ್ಟದಲ್ಲಿರುವವರೊಂದಿಗೆ ನಿಂತು ಅವರಿಗೆ ಆತ್ಮಸ್ಥೈರ್ಯ ತುಂಬುವುದು ಗುರುತತ್ತ್ವದ ನೈಜ ಅನುಷ್ಠಾನವಾಗಿದೆ ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಹೇಳಿದರು.

ಸೆ. 22ರಂದು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ಮಾಣಿ ಗ್ರಾಮದ ಕೊಡಾಜೆ ಕೋಚಪಳಿಕೆಯ ಕುಮಾರಿ ಲಲಿತಾ ಅವರ ಮನೆಯಲ್ಲಿ ನಡೆದ ಭಜನಾ ಸಂಕೀರ್ತನೆ ಹಾಗೂ ನಾರಾಯಣ ಗುರುಗಳ ತತ್ವಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂದೆ-ತಾಯಿಯ ಆಶ್ರಯವಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿರುವ ಮಹಿಳೆಯೊಬ್ಬರು, ಅನಾರೋಗ್ಯ ಹಾಗೂ ಅಂಗವೈಕಲ್ಯದಿಂದ ಬಳಲುತ್ತಿರುವ ಕುಟುಂಬ ಸದಸ್ಯರ ಜವಾಬ್ದಾರಿಯ ಜೊತೆಗೆ ನಾಲ್ವರು ಅಕ್ಕ-ತಂಗಿಯರನ್ನು ನೋಡಿಕೊಳ್ಳುತ್ತಿರುವ ಪರಿಸ್ಥಿತಿಯನ್ನು ಮನಗಂಡ ಯುವವಾಹಿನಿ ಸದಸ್ಯರು ಕುಟುಂಬಕ್ಕೆ ಮಾನವೀಯವಾಗಿ ಸ್ಪಂದಿಸಿದರು.

ಕುಟುಂಬದ ಕಷ್ಟಕರ ಪರಿಸ್ಥಿತಿಯನ್ನು ಕಂಡ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ ಅವರು, ಇಂತಹ ಸಂದರ್ಭದಲ್ಲಿ ಕೇವಲ ಕಾರ್ಯಕ್ರಮ ನಡೆಸುವುದಕ್ಕಿಂತ ಕುಟುಂಬದವರೊಂದಿಗೆ ಆತ್ಮೀಯವಾಗಿ ಬೆರೆತು ಅವರಿಗೆ ಧೈರ್ಯ ತುಂಬುವುದು ಅಗತ್ಯ ಎಂಬ ನಿರ್ಧಾರ ಕೈಗೊಂಡರು. ಅವರ ಮುಂದಾಳತ್ವದಲ್ಲಿ ಘಟಕದ ಸದಸ್ಯರು ಸ್ವಯಂಪ್ರೇರಿತವಾಗಿ ಕುಟುಂಬದ ಮನೆಗೆ ತೆರಳಿ ಭಜನಾ ಸಂಕೀರ್ತನೆ ನಡೆಸಿ, ನಾರಾಯಣ ಗುರುಗಳ ತತ್ವಸಂದೇಶವನ್ನು ಹಂಚಿಕೊಂಡರು.

ಅಲ್ಲದೆ, ಗುರುಪೂಜೆಗೆ ಅಗತ್ಯವಿರುವ ಹಣ್ಣು-ಹಂಪಲು, ಹೂವು, ಪಂಚಕಜ್ಜಾಯ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಸದಸ್ಯರೇ ಸ್ವತಃ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಜನಾರ್ದನ ಪೂಜಾರಿ ಕೊಡಂಗೆ, ಯಶೋಧರ, ಬಾಲಕೃಷ್ಣ ಶೇರ, ಸುಜಿತ್ ಬಾಕಿಲ ಹಾಗೂ ಸಚಿನ್ ಅಮೀನ್ ಪೆರಾಜೆ ಸೇರಿದಂತೆ ಘಟಕದ ನಿರ್ದೇಶಕರು, ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆತರು.

ಸಂಕಷ್ಟದಲ್ಲಿರುವ ಕುಟುಂಬದೊಂದಿಗೆ ನಿಂತು, ನಾರಾಯಣ ಗುರುಗಳ ತತ್ವವನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ ಮಾನವೀಯ ಕಾಳಜಿ ಮತ್ತು ಸೇವೆಯ ಮೂಲಕ ಅಳವಡಿಸಿಕೊಂಡ ಈ ಕಾರ್ಯಕ್ರಮವು ಗಮನಾರ್ಹವಾಗಿ ನಡೆಯಿತು.

Leave a Reply

Your email address will not be published. Required fields are marked *