Breaking
22 Sep 2026, Tue

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿ ಕೊಲೆ: ಕಾರಿನಲ್ಲಿ ತುಂಡುಗಳಾದ ಮೃತದೇಹ ಪತ್ತೆ; ಪತ್ನಿ, ಮಗ ನಾಪತ್ತೆ

ಉಡುಪಿ ಮೂಲದ ಪ್ರಕಾಶ್ ಕುಂದರ್ ಎಂಬುವವರು ಶಾರ್ಜಾದಲ್ಲಿ ಕೊಲೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅವರ ಮೃತದೇಹ ಸ್ವಂತ ಕಾರಿನೊಳಗೆ ಪತ್ತೆಯಾಗಿದ್ದು, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದೇ ವೇಳೆ ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಮಗ ನಾಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಪ್ರಕಾಶ್ ಅವರು ಶಾರ್ಜಾದಲ್ಲಿ ಪತ್ನಿ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗನೊಂದಿಗೆ ವಾಸಿಸುತ್ತಿದ್ದರು. ಅವರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಟೀನಾ ಶಿಕ್ಷಕಿಯಾಗಿ ಉದ್ಯೋಗದಲ್ಲಿದ್ದರು. ದಂಪತಿಗೆ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿತ್ತು.

ಜುಲೈ 20ರ ಸುಮಾರಿಗೆ ಪ್ರಕಾಶ್ ಅವರು ತಮ್ಮ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಅವರು, ಅಂದು ಟೆಕ್ಸ್ಟ್ ಮೆಸೇಜ್ ಕಳುಹಿಸಿದ್ದರು. ದೂರವಾಣಿ ಮೂಲಕ ಮಾತನಾಡುವಂತೆ ಸಹೋದರರು ಒತ್ತಾಯಿಸಿದಾಗ ಸಂಭಾಷಣೆ ಕಡಿತಗೊಂಡಿತ್ತು ಎಂದು ತಿಳಿದುಬಂದಿದೆ.

ಇದರಿಂದ ಆತಂಕಗೊಂಡ ಕುಟುಂಬಸ್ಥರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿಯವರು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಕಾಶ್ ತಮ್ಮ ಸ್ವಗ್ರಾಮಕ್ಕೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಅನುಮಾನ ಮೂಡಿ ಶಾರ್ಜಾ ಪೊಲೀಸರನ್ನು ಸಂಪರ್ಕಿಸಿ ನಾಪತ್ತೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಶೋಧ ನಡೆಸಿದ ವೇಳೆ ಪ್ರಕಾಶ್ ಅವರದೇ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಅವರನ್ನು ಕೊಲೆ ಮಾಡಿ ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿರುವ ಶಂಕೆ ವ್ಯಕ್ತವಾಗಿದೆ.

ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಮಗನ ಕುರಿತು ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಅವರ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದಲ್ಲಿ ಅವರ ಪಾತ್ರವಿದೆಯೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಶಾರ್ಜಾದಿಂದ ತೆರಳಿದ್ದಾರೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಅವರು ಶಾರ್ಜಾದಿಂದ ಭಾರತಕ್ಕೆ ತೆರಳಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

ದಂಪತಿಗಳ ನಡುವೆ ಯಾವುದೇ ಗಂಭೀರ ವಿವಾದಗಳಿದ್ದ ಬಗ್ಗೆ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಕಾಶ್ ಕಳೆದ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದು ಹೋಗಿದ್ದರು ಎನ್ನಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರಕಾಶ್ ಅವರ ಪತ್ನಿ ಹಾಗೂ ಮಗನ ಇರುವಿಕೆ ಸೇರಿದಂತೆ ಕೊಲೆಗೆ ಕಾರಣವೇನು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಶಾರ್ಜಾದಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪ್ರಕಾಶ್ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *