ಮಾಣಿ: ಹುಟ್ಟಿನಿಂದ ಸಾವಿನವರೆಗಿನ ಬದುಕಿನಲ್ಲಿ ಮಾನವೀಯತೆ, ಸಮಾನತೆ ಹಾಗೂ ಸಹೋದರತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ರೇಣುಕಾ ಕಣಿಯೂರು ಹೇಳಿದರು.

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೆಪ್ಟೆಂಬರ್ 21ರಂದು ಪೆರಾಜೆ ಗ್ರಾಮದ ಧರ್ಮಣ ಪೂಜಾರಿ ಅವರ ಕುಟುಂಬದ ಧರ್ಮಚಾವಡಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೇಣುಕಾ ಕಣಿಯೂರು, “ಹುಟ್ಟಿನಿಂದ ಸಾವಿನವರೆಗಿನ ಬದುಕಿನಲ್ಲಿ ಮಾನವೀಯತೆಯ ಮಹತ್ವವನ್ನು ಅರಿತುಕೊಳ್ಳಬೇಕು. ಪ್ರಾಣಿ–ಪಕ್ಷಿಗಳಲ್ಲಿಯೂ ಕಾಣುವ ಸಹೋದರತೆ ಹಾಗೂ ಆತ್ಮೀಯತೆಯನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದೈವಪಾತ್ರಿ ಧರ್ಮಣ ಪೂಜಾರಿ, ಯುವವಾಹಿನಿ (ರಿ.) ಮಾಣಿ ಘಟಕವು ಸಮಾಜಮುಖಿಯಾಗಿ ನಡೆಸುತ್ತಿರುವ ವಿವಿಧ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿ ಸಮಾಜಕ್ಕೆ ಮಾದರಿಯಾಗಿದ್ದು, ಮುಂದೆಯೂ ಇನ್ನಷ್ಟು ಉತ್ತಮ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಂಘಟನೆಗೆ ಅವಕಾಶ ಹಾಗೂ ಶಕ್ತಿ ದೊರೆಯಲಿ ಎಂದು ಶುಭ ಹಾರೈಸಿದರು.

ಭಜನಾ ತಂಡದ ಜವಾಬ್ದಾರಿ ವಹಿಸಿಕೊಂಡಿರುವ ಜನಾರ್ದನ ಪೂಜಾರಿ ಕೊಡಂಗಿ ಹಾಗೂ ತಂಡದವರು ಭಕ್ತಿಪೂರ್ವಕವಾಗಿ ಭಜನಾ ಸಂಕೀರ್ತನೆ ನಡೆಸಿ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಮೆರುಗು ನೀಡಿದರು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಸಾಯಿ ಕೊಡಾಜೆ, ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಲ, ಜಯಂತ ಬರಿಮಾರು, ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಉಪಾಧ್ಯಕ್ಷ ಸುಜಿತ್ ಅಂಚನ್ ಸೇರಿದಂತೆ ಯುವವಾಹಿನಿಯ ನಿರ್ದೇಶಕರು, ಸಂಘಟನಾ ಕಾರ್ಯದರ್ಶಿಗಳು, ಸದಸ್ಯರು ಹಾಗೂ ನೆರೆಯವರು ಉಪಸ್ಥಿತರಿದ್ದರು.
ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿದರು. ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಶ್ರೀಧರ ಪೂಜಾರಿ ಮುಜಲ ವಂದಿಸಿದರು.


