ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಸೆಪ್ಟೆಂಬರ್ 22ರಂದು ಬೆಳಗಿನ ಜಾವ ಪೊಲೀಸರು ಮಾರ್ನಿಂಗ್ ರೌಂಡ್ಸ್ನಲ್ಲಿದ್ದ ವೇಳೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಬೆಳಗ್ಗೆ ಸುಮಾರು 6.30ಕ್ಕೆ ಆಡ್ಯಾರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಬೆನ್ನಟ್ಟಿ, ಪಡೀಲ್ನ ಟೊಯೋಟಾ ಶೋರೂಮ್ ಎದುರು ತಡೆದು ಪರಿಶೀಲಿಸಿದ್ದಾರೆ.

ಪರಿಶೀಲನೆ ವೇಳೆ ಲಾರಿಯಲ್ಲಿ ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಬಿಗಿಯಾಗಿ ಕಟ್ಟಿ, ಒಂದರ ಮೇಲೊಂದು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ 23 ವರ್ಷದ ಸಾದಿಕ್ ಜಿ. ಎಂಬ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 17 ಜಾನುವಾರುಗಳು, ಲಾರಿ ಹಾಗೂ ಆರೋಪಿಯ ಮೊಬೈಲ್ ಫೋನ್ ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಪರಾರಿಯಾಗಿರುವ ಸುಬಾನ್ ಹಾಗೂ ರೆಹಮಾನ್ ಅವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದು, ತನಿಖೆ ನಡೆಸುತ್ತಿದ್ದಾರೆ.






