Breaking
8 Sep 2026, Tue

ಉಪ್ಪಿನಂಗಡಿ ಬಳಿ ಟಾಟಾ ಏಸ್ ಪಲ್ಟಿ: 11 ವರ್ಷದ ಬಾಲಕನಿಗೆ ಗಾಯ

ಪುತ್ತೂರು: ಉಪ್ಪಿನಂಗಡಿ ಸಮೀಪದ ಸೇಡಿಯಾಪು–ಕಾಪು ಭಾಗದಲ್ಲಿ ಸರಕು ಸಾಗಣೆ ಟಾಟಾ ಏಸ್ ವಾಹನ ಪಲ್ಟಿಯಾಗಿ 11 ವರ್ಷದ ಬಾಲಕ ಗಾಯಗೊಂಡ ಘಟನೆ ಜುಲೈ 23ರ ಗುರುವಾರ ನಡೆದಿದೆ.

ಕೊಯಿಲಾದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಟಾಟಾ ಏಸ್ ವಾಹನ ಚಲಾಯಿಸುತ್ತಿದ್ದ ವೇಳೆ, ವಾಹನದ ಚಕ್ರಗಳು ರಸ್ತೆಯಂಚಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ವಾಹನದಲ್ಲಿದ್ದ ಅವರ ಪುತ್ರ ಮೊಹಮ್ಮದ್ ಅಮೀನ್ (11) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯರ ಪ್ರಕಾರ, ಈ ಭಾಗದಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆಯಂಚಿಗೆ ಮಣ್ಣು ಹಾಕದಿರುವುದರಿಂದ ರಸ್ತೆ ಆಳವಾಗಿದ್ದು, ಡಿವೈಡರ್ ಕಾಮಗಾರಿಯೂ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ.

ಈ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *