ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್‌ಗೆ ಹತ್ತಿದ್ದ ಮಹಿಳೆಯೊಬ್ಬಳು ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗ್ ಕಳವು ಮಾಡಿ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಎ-57 ಎಫ್ 6331 ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ದಟ್ಟಣೆಯನ್ನು ದುರುಪಯೋಗಪಡಿಸಿಕೊಂಡ ಮಹಿಳೆ, ಕಂಡಕ್ಟರ್‌ನ ಡ್ಯೂಟಿ ಬ್ಯಾಗ್ ಕದ್ದಿದ್ದಾಳೆ. ಬಳಿಕ ಕದ್ದ ಬ್ಯಾಗ್ ಅನ್ನು ತಾನು ತಂದಿದ್ದ ಬ್ಯಾಗ್‌ನೊಳಗೆ ಯಾರಿಗೂ ಗೊತ್ತಾಗದಂತೆ ಅಡಗಿಸಿಟ್ಟಿದ್ದಳು.

ಕಂಡಕ್ಟರ್‌ಗೆ ಬ್ಯಾಗ್ ನಾಪತ್ತೆಯಾದುದು ಗೊತ್ತಾಗುತ್ತಿದ್ದಂತೆ ಬಸ್‌ನ ಬಾಗಿಲುಗಳನ್ನು ಮುಚ್ಚಿದ್ದು, ಮಹಿಳೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಮಾಯಕಿಯಂತೆ ನಟಿಸಿದ ಮಹಿಳೆ ಆರಂಭದಲ್ಲಿ ತಾನು ಕಳ್ಳತನ ಮಾಡಿಲ್ಲ ಎಂದು ಮಹಿಳೆ ವಾದಿಸಿದ್ದರೂ, ಆಕೆಯ ಬ್ಯಾಗ್ ಪರಿಶೀಲಿಸಿದಾಗ ಕಂಡಕ್ಟರ್‌ನ ಟಿಕೆಟ್ ಹಾಗೂ ಹಣದ ಬ್ಯಾಗ್ ಪತ್ತೆಯಾಗಿದೆ.

ಬಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ತಮಿಳುನಾಡು ಮೂಲದವಳು ಎಂದು ತಿಳಿದುಬಂದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



