ಮಂಗಳೂರು: “ಡ್ರಗ್ಸ್ ಫ್ರಿ ಮಂಗಳೂರು” ಅಭಿಯಾನದ ಭಾಗವಾಗಿ ಮಂಗಳೂರು ನಗರ ಸಿಸಿಬಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ದೆಹಲಿಯಿಂದ ಎಂಡಿಎಂಎ ಮಾದಕವಸ್ತು ಖರೀದಿಸಿಕೊಂಡು ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ಮೂಲದ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಬಂಧಿಸಲಾಗಿದೆ.

ಬಂಧಿತರನ್ನು ಬೆಳ್ತಂಗಡಿ ತಾಲೂಕಿನ ಇಂಡಬೆಟ್ಟು ಗ್ರಾಮದ ಮೊಹಮ್ಮದ್ ಅಲ್ಫಾಜ್ (28) ಹಾಗೂ ಉಜಿರೆ ಲಾಯಿಲಾ ಗ್ರಾಮದ ಮೊಹಮ್ಮದ್ ಮುಸ್ತಾಫಾ (28) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು ₹5.20 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ, ಬ್ಯಾಗ್ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಗೆ ಜೂನ್ 25ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಅಣ್ಣಪ್ಪ ಸ್ವಾಮಿ @ ಮನು ಬಂಧನವೇ ಸುಳಿವಾಗಿತ್ತು. ಆತನಿಂದ 15.17 ಗ್ರಾಂ ಎಂಡಿಎಂಎ (ಸುಮಾರು ₹1.50 ಲಕ್ಷ ಮೌಲ್ಯ) ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು.

ತನಿಖೆಯನ್ನು ಮುಂದುವರಿಸಿದ ಸಿಸಿಬಿ ತಂಡ, ಮಾದಕವಸ್ತು ಪೂರೈಕೆ ಜಾಲದ ಮಾಹಿತಿ ಸಂಗ್ರಹಿಸಿ, ಆರೋಪಿಗಳು ದೆಹಲಿಯಿಂದ ಮಾದಕವಸ್ತು ಖರೀದಿಸಿಕೊಂಡು ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದರು. ಅದರಂತೆ ಜುಲೈ 15ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಯಿತು.

ತನಿಖೆಯಲ್ಲಿ ಆರೋಪಿಗಳು ದೆಹಲಿಯಿಂದ ಕಾರಿನಲ್ಲಿ ಎಂಡಿಎಂಎ ತಂದು, ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗೆ ತನಿಖೆ ಮುಂದುವರಿದಿದೆ.

ಇದಲ್ಲದೆ, ಬಂಧಿತ ಮೊಹಮ್ಮದ್ ಅಲ್ಫಾಜ್ ವಿರುದ್ಧ ಈ ಹಿಂದೆ 2024ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಹಾಗೂ 2026ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ಎಂಡಿಎಂಎ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

ಈ ಭಾರೀ ಮಾದಕವಸ್ತು ಜಾಲವನ್ನು ಭೇದಿಸುವಲ್ಲಿ ಮಂಗಳೂರು ನಗರ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಾಚರಣೆ ಪ್ರಮುಖ ಪಾತ್ರ ವಹಿಸಿದೆ.


