Breaking
19 Sep 2026, Sat

ಮನೆಯ ಬಾಗಿಲು ಮುರಿದು ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಾರ್ಕಳ: ಕಸಬಾ ಗ್ರಾಮದ ಆನಂದ ನಗರದಲ್ಲಿ ಕಳ್ಳನೊಬ್ಬ ಮನೆಯ ಬಾಗಿಲು ಮುರಿದು ಅಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಘಟನೆ ನಡೆದಿದೆ.

ಆನಂದ ನಗರದ ‘ಸ್ಟಾರ್ ಕೇಬಲ್ ನೆಟ್‌ವರ್ಕ್’ ಸಮೀಪದ ಕರಿಯಕಲ್ಲು ನಿವಾಸಿ ಹರೀಶ್ ಶೆಟ್ಟಿ (46) ಅವರು ಏ. 16 ರಂದು ಮನೆಗೆ ಬೀಗ ಹಾಕಿ ಹೋಗಿದ್ದರು. ಏಪ್ರಿಲ್‌ 19 ರಂದು ಮನೆಯ ಬಾಗಿಲು ಮುರಿದುದನ್ನು ಗಮನಿಸಿದ ಸ್ಥಳೀಯರು ಹರೀಶ್‌ ಅವರಿಗೆ ಮಾಹಿತಿ ತಿಳಿಸಿದ್ದಾರೆ.

ಬಳಿಕ ಮನೆಗೆ ಬಂದು ಪರಿಶೀಲಿಸಿದಾಗ, ಕಳ್ಳನು ಮನೆಯ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ, ಒಳಗಿದ್ದ ಕಪಾಟಿನ ಬೀಗವನ್ನು ಸಹ ಮುರಿದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ. ಬಳಿಕ ಮನೆಯೊಳಗಿದ್ದ ಸ್ಕೂಟರ್ ಕೀಯನ್ನು ಪಡೆದು, ಅಂಗಳದಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್‌ನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕಳ್ಳತನದ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು ಪ್ರಕರಣದ ಕುರಿತು ಹರೀಶ್ ಶೆಟ್ಟಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *