Breaking
2 Mar 2026, Mon

ಬಿ.ಸಿ.ರೋಡಿನ ರೋಟರಿ ಹಾಲ್ ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನ

ಬಂಟ್ವಾಳ: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಶ್ರಯದಲ್ಲಿ, ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನವು ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ರೋಟರಿ ಹಾಲ್ ನಲ್ಲಿ ಮಾರ್ಚ್ 1 ರಂದು ನಡೆಯಿತು.

ಮಂಗಳೂರು ಪ್ರಸಾದ್ ನೇತ್ರಾಲಯದ ಎಂ.ಡಿ ಡಾ. ಕೃಷ್ಣಪ್ರಸಾದ ಕೂಡ್ಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಂಶವಾಹಿ(ಜೀನ್)ಗಳ ಕುರಿತು ಸಂಶೋಧನೆಗಳು ಹಾಗೂ ಚಿಕಿತ್ಸಾ ವಿಧಾನಗಳು ಭಾರತದಲ್ಲೂ ಪ್ರಗತಿಯಲ್ಲಿದ್ದು, ಯಶಸ್ವಿಯಾಗಿ ಸಾಮಾನ್ಯ ವರ್ಗದ ಕೈಗೆಟಕುವಂಥ ಯೋಜನೆಗಳು ಜಾರಿಯಾದರೆ, ದಿವ್ಯಾಂಗರಿಗೆ ಅನುಕೂಲವಾಗುತ್ತದೆ. ದಿವ್ಯಾಂಗರು ವಿಶೇಷವಾದ ಶಕ್ತಿ ಪಡೆದವರಾಗಿದ್ದು, ಸೂಕ್ತ ನೆರವು ಅಗತ್ಯವಾಗಿದೆ. ಕಣ್ಣು ಸಹಿತ ಬೇರೆ ಬೇರೆ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯ. ಸಕ್ಷಮದ ಶಿಫಾರಸಿನಲ್ಲಿ ಬಂದ ದಿವ್ಯಾಂಗರಿಗೆ ತಮ್ಮಲ್ಲಿ ಉಚಿತ ಚಿಕಿತ್ಸೆ ಹಾಗೂ ಫಿಸಿಯೋಥೆರಪಿಯನ್ನು ಉಚಿತವಾಗಿ ಒದಗಿಸುವುದಾಗಿ ತಿಳಿಸಿದರು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಕ್ಷಮ ಜಿಲ್ಲಾ ಘಟಕ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಅವರು ಮಾತನಾಡಿ ವಿಶೇಷವಾಗಿ ಅಗತ್ಯವುಳ್ಳ ದಿವ್ಯಾಂಗರಿಗೆ ಬೇಕಾದ ಸಕಲ ನೆರವು ಒದಗಿಸಲು ಸಕ್ಷಮ ಸದಾ ಬದ್ಧವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಎಎಸ್ ಎಫ್ ಇಂಡಿಯಾ ಲಿಮಿಟೆಡ್ ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್ ಪೈ ಮಾತನಾಡಿ ತಮ್ಮ ಸಂಸ್ಥೆಯಿಂದ ನೆರವು ನೀಡುವುದಾಗಿ ಘೋಷಿಸಿದರು.
ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಕೇಶವ ಕುಮಾರ್ ರಾಜ್ಯದಲ್ಲಿ ಸಕ್ಷಮ ಕಾರ್ಯಾಚರಣೆ ಕುರಿತು ವಿವರಣೆ ನೀಡಿದರು.

ವಿಕಾಸಂ ಸೇವಾ ಫೌಂಡೇಶನ್ ಸಹಸಂಸ್ಥಾಪಕ ಗೋಪಾಲ್ ಗೋವಿಂದತೋಟ ಶುಭ ಹಾರೈಸಿದರು.

ವಿಶೇಷಚೇತನ ಸಾಧಕರಾದ ತಾಲೂಕು ಹಿರಿಯ ನಾಗರಿಕರ ಸಬಲೀಕರಣ ಹಾಗೂ ವಿಶೇಷ ಚೇತನರ ಕಲ್ಯಾಣ ಇಲಾಖೆ ಎಂ.ಆರ್.ಡಬ್ಲ್ಯು ಗಿರೀಶ್ ಕುಮಾರ್ ಎ ಮತ್ತು ಪುತ್ತೂರಿನ ಸಾಧಕಿ ನೇಹಾ ರೈ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ನೇಹಾ ರೈ ಅವರು ನಿಮ್ಮ ಮಕ್ಕಳನ್ನು ದುರ್ಬಲರು ಅಂದುಕೊಳ್ಳಬೇಡಿ ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಾಯಿ ಕಾರಣ, ನಿಮ್ಮ ಮಕ್ಕಳನ್ನು ದುರ್ಬಲರು ಎಂದು ಅಂದುಕೊಳ್ಳಬೇಡಿ, ಅವರನ್ನು ಗಟ್ಟಿಗೊಳಿಸಿ, ಅವರನ್ನು ಬೆಂಬಲಿಸಿ, ಅವರಿಗೆ ಶಿಕ್ಷಣ ಕೊಡಿ, ಅವರ ಕೌಶಲ್ಯಗಳನ್ನು ಹೆಚ್ಚಿಸುವಂತೆ ಮಾಡಿ, ನೀವು ಬೆಂಬಲಿಸಿದರೆ, ನನ್ನ ಹಾಗೆ ಎಲ್ಲ ಮಕ್ಕಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ವಿಕಾಸ ಸಹಸಂಸ್ಥಾಪಕ ಧರ್ಮಪ್ರಸಾದ್ ರೈ, ವೈದ್ಯರು ಹಾಗೂ ಉಪನ್ಯಾಸಕ ಮತ್ತು ಆರೆಸ್ಸೆಸ್ ತಾಲೂಕು ಸಂಘಚಾಲಕ ಡಾ. ಬಾಲಕೃಷ್ಣ ಕುಮಾರ್ ಉಪಸ್ಥಿತರಿದ್ದರು. ಸಕ್ಷಮ ದ.ಕ.ಜಿಲ್ಲಾ ಘಟಕ ಕಾರ್ಯದರ್ಶಿ ಹರೀಶ್ ಪ್ರಭು ವರದಿ ವಾಚಿಸಿದರು.

ಸಮಾಜ ಸ್ಪಂದಿಸುವಿಕೆ ಅಗತ್ಯ:

ಕಾರ್ಯಕ್ರಮದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಮಾತನಾಡಿ ಪ್ರಸ್ತುತ ವ್ಯವಸ್ಥೆಯಲ್ಲಿ ದಿವ್ಯಾಂಗರು ಎದುರಿಸುವ ಸವಾಲುಗಳ ಕುರಿತು ವಿವರಿಸಿ, ಸಮಾಜದ ಕಾಳಜಿ ಸ್ಪಂದನೆ ಅಗತ್ಯವಾಗಿದ್ದು, ಸರಕಾರ ಹಾಗೂ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣ, ಉದ್ಯೋಗ ಮೀಸಲಾತಿಯನ್ನು ಒದಗಿಸಬೇಕು ಎಂದರು.

ದಿವ್ಯಾಂಗರ ಕುರಿತು ಆರಂಭಿಕ ಗುರುತಿಸುವಿಕೆ ಕುರಿತು ವಿಕಾಸಂ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ವಿಚಾರ ಮಂಡಿಸಿ ಸರಿಯಾದ ಸಮಯದಲ್ಲಿ ಗುರುತಿಸುವಿಕೆ ಅಗತ್ಯ ಎಂದರು. ನಿರಾಮಯ ಯೋಜನೆ, ಕಾನೂನು ಪೋಷಕತ್ವ, ಯುಡಿಐಡಿ ಕಾರ್ಡ್ ಕುರಿತು ಚೇತನ ಬಾಲವಿಕಾಸ ಕೇಂದ್ರದ ಗಣರಾಜ ಭಟ್ ವಿಚಾರ ಮಂಡಿಸಿದರು.

ವಿಕಾಸಂ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಸ್ವಾಗತಿಸಿದರು. ಸದಸ್ಯ ಮಂಜುನಾಥ್ ವಂದಿಸಿದರು. ಸುರೇಖಾ ಯಳವರ ಕಾರ್ಯಕ್ರಮ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಸ್ಕರ ಹೊಸಮನೆ ವಂದಿಸಿದರು. ಸತೀಶ್ ರಾವ್ ಸಹಕರಿಸಿದರು. ಲೋಕಾಕ್ಷ ಜಾದೂ ಅವರಿಂದ ಜಾದೂ ಪ್ರದರ್ಶನ ನಡೆಯಿತು. ವಿಶೇಷಚೇತನ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಅವರು ಕಾಲಿನಲ್ಲಿ ಭಗತ್ ಸಿಂಗ್ ಚಿತ್ರ ಬರೆದು ಗಮನ ಸೆಳೆದರು. ಅರ್ಹ ದಿವ್ಯಾಂಗರಿಗೆ ದಿವ್ಯಾಂಗ ಉಪಯೋಗಿ ಉಪಕರಣಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *