Breaking
2 Mar 2026, Mon

ಸುಳ್ಯದ ಅಜ್ಜಾವರದಲ್ಲಿ ರಸ್ತೆ ಕಾಮಗಾರಿ ವಿಳಂಬ; ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ದೀರ್ಘಕಾಲದಿಂದ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡುವ ಬ್ಯಾನರನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಶಿರಾಜೆ 2ನೇ ವಾರ್ಡ್ನ ಅಡ್ಡ ರಸ್ತೆಯಿಂದ ಬೆಳ್ಯ 4ನೇ ವಾರ್ಡ್ನ ಬೀನಡ್ಕವರೆಗಿನ ಸುಮಾರು 3 ಕಿಲೋಮೀಟರ್ ರಸ್ತೆ ಡಾಂಬರೀಕರಣಗೊಳಿಸುವಲ್ಲಿ ಅತಿಯಾದ ವಿಳಂಬವಾಗಿದೆ ಎಂದು ಬ್ಯಾನರ್‌ ನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಸುಮಾರು 40 ವರ್ಷಗಳಿಂದ ಈ ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಗ್ರಾಮಸ್ಥರು ಪದೇಪದೇ ಮನವಿ ಸಲ್ಲಿಸುತ್ತಿದ್ದರೂ ಕಾಮಗಾರಿ ಆರಂಭವಾಗಿಲ್ಲವೆಂದು ಆರೋಪಿಸಿದ್ದಾರೆ.

ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ ಭಾಗದಲ್ಲಿ ಕುಡಿಯುವ ನೀರಿನ ಸೌಲಭ್ಯವೂ ಸಮರ್ಪಕವಾಗಿಲ್ಲ. ಸಂಬಂಧಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಲ್ಲಿಸಿದ ಮನವಿಗಳಿಗೆ ಸ್ಪಂದಿಸದೇ, ಚುನಾವಣೆಯ ಸಮಯದಲ್ಲಿ ಮಾತ್ರ ಸುಳ್ಳು ಭರವಸೆಗಳೊಂದಿಗೆ ಮತ ಕೇಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ರಸ್ತೆ ಸಮಸ್ಯೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದರೆ, ಶಿರಾಜೆ ಮತ್ತು ಬೆಳ್ಯ–ಬೀನಡ್ಕ ನಿವಾಸಿಗಳು ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಮೂಲಸೌಕರ್ಯಗಳ ಕೊರತೆ ಬಗ್ಗೆ ಗ್ರಾಮಸ್ಥರ ಅಸಮಾಧಾನ ಇದೀಗ ಚುನಾವಣಾ ಬಹಿಷ್ಕಾರದ ಹಂತ ತಲುಪಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಗ್ರಾಮದಿಂದ ಕೇಳಿಬಂದಿದೆ.

Leave a Reply

Your email address will not be published. Required fields are marked *