Breaking
23 Jul 2026, Thu

ಸುಳ್ಯದಲ್ಲಿ ವಿವಾಹಿತೆ ಅನುಮಾನಾಸ್ಪದ ಸಾವು: ಕೊಲೆ ಆರೋಪದಡಿ ಮಾವ, ಅತ್ತೆ, ನಾದಿನಿ ಬಂಧನ

ಸುಳ್ಯ: ಕೌಟುಂಬಿಕ ಕಿರುಕುಳ ಹಾಗೂ ಮನಸ್ತಾಪದ ಆರೋಪದ ಹಿನ್ನೆಲೆಯಲ್ಲಿ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಆರೋಪದಡಿ ಮೃತೆಯ ಮಾವ, ಅತ್ತೆ ಹಾಗೂ ನಾದಿನಿ ಸೇರಿ ಮೂವರನ್ನು ಸುಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ ಅವರ ಪುತ್ರಿ ಫಾತಿಮತ್ ನಿಶಾನ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತೆಯ ಮಾವ ಸಿ.ಪಿ. ಅಲವಿ (54), ಅತ್ತೆ ಅಯಿಷಾ ಸಿ.ಎ. ಹಾಗೂ ನಾದಿನಿ ಫಸಿಲಾ ಸಿ.ಎ. (29) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಫಾತಿಮತ್ ನಿಶಾನ ಅವರ ವಿವಾಹ ನಡೆದಿತ್ತು. ಜುಲೈ 18ರಂದು ರಾತ್ರಿ ತಾಯಿ ಜುಬೈದಾ ಅವರಿಗೆ ಕರೆ ಮಾಡಿದ್ದ ನಿಶಾನ, ಗಂಡನ ಮನೆಯಲ್ಲಿ ಮಾವ, ಅತ್ತೆ ಮತ್ತು ನಾದಿನಿ ತನ್ನ ಮೇಲೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.

ದೂರುದಾರರ ಆರೋಪದಂತೆ, ತಾಯಿ-ಮಗಳ ಸಂಭಾಷಣೆ ನಡೆಯುತ್ತಿದ್ದ ವೇಳೆ ಮಾವ ಅಲವಿ ಫೋನ್ ಕಸಿದುಕೊಂಡು, “ನಿನ್ನ ಮಗಳನ್ನು ಕೊಲ್ಲುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದರು. ಈ ಘಟನೆಯ ಬೆನ್ನಲ್ಲೇ ಆತಂಕಗೊಂಡ ತಾಯಿ ಮಗಳ ಮನೆಗೆ ತೆರಳುವಷ್ಟರಲ್ಲಿ, ನಿಶಾನ ಮೃತಪಟ್ಟಿರುವ ಸುದ್ದಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ, ಕೌಟುಂಬಿಕ ಮನಸ್ತಾಪದ ಕಾರಣದಿಂದ ಮಾವ, ಅತ್ತೆ ಹಾಗೂ ನಾದಿನಿ ಸೇರಿ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಮೃತೆಯ ತಾಯಿ ಜುಬೈದಾ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಸುಳ್ಯ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026 ದಾಖಲಿಸಿ, ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 85, 103(1) ಹಾಗೂ 3(5)ರ ಅಡಿಯಲ್ಲಿ ಕೊಲೆ ಹಾಗೂ ಗೃಹ ಹಿಂಸಾಚಾರ ಸಂಬಂಧಿತ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ತನಿಖೆಯ ಭಾಗವಾಗಿ ಜುಲೈ 22ರಂದು ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *