Breaking
1 Sep 2026, Tue

ಎರಡು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ: ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಅರಂತೋಡು ಸಮೀಪದ ಆಲೆಟ್ಟಿ ಗ್ರಾಮದ ಕುದ್ಕುಳಿ ನಿವಾಸಿ ಗಿರೀಶ್ ಅವರು ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.
ಮನೆಯಿಂದ ಹುಲ್ಲು ತರಲು ಹೊರಟಿದ್ದ ಗಿರೀಶ್ ಅವರು ಬಳಿಕ ಮನೆಗೆ ವಾಪಸ್ ಆಗಿರಲಿಲ್ಲ. ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.


ಸುಳ್ಯ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಪಯಸ್ವಿನಿ ನದಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ನದಿ ತೀರದಲ್ಲಿ ಗಿರೀಶ್ ಅವರಿಗೆ ಸೇರಿದ ಕೊಡೆ ಹಾಗೂ ಕತ್ತಿ ಪತ್ತೆಯಾಗಿದ್ದರಿಂದ ನದಿಯ ಸುತ್ತಮುತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿ ಹುಡುಕಾಟ ಮುಂದುವರಿಸಲಾಗಿತ್ತು.


ಆಗಸ್ಟ್ 30ರ ಬೆಳಗ್ಗೆ ಮತ್ತೆ ಶೋಧ ಕಾರ್ಯ ನಡೆಸಿದ ವೇಳೆ ಪಯಸ್ವಿನಿ ನದಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ ಅದು ನಾಪತ್ತೆಯಾಗಿದ್ದ ಗಿರೀಶ್ ಅವರ ಮೃತದೇಹ ಎಂದು ಗುರುತಿಸಲಾಗಿದೆ.


ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಮೃತದೇಹ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ತೀವ್ರ ಆಘಾತ ತಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದು, ಗಿರೀಶ್ ಅವರು ನದಿಗೆ ಹೇಗೆ ಬಿದ್ದರು ಹಾಗೂ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಮೃತದೇಹವನ್ನು ಅಗತ್ಯ ಪ್ರಕ್ರಿಯೆಗಳ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

Leave a Reply

Your email address will not be published. Required fields are marked *