Breaking
13 Aug 2026, Thu

ಕೊಲ್ಲಮೊಗ್ರು: ವಿಜೃಂಭಣೆಯಿಂದ ನಡೆದ ಆಟಿದ ಕೂಟ–2026 ಸಂಭ್ರಮ

ಕೊಲ್ಲಮೊಗ್ರು: ಯುವಜನ ಸಂಯುಕ್ತ ಮಂಡಳಿ (ರಿ.), ಸುಳ್ಯ, ಚೈತನ್ಯ ಯುವತಿ ಮಂಡಲ, ಕೊಲ್ಲಮೊಗ್ರು, ಮಹಾತ್ಮ ಯುವಕ ಮಂಡಲ ಹಾಗೂ ಕೆವಿಜಿ ಅನುದಾನಿತ ಪ್ರೌಢಶಾಲೆ, ಕೊಲ್ಲಮೊಗ್ರು ಇವರ ಜಂಟಿ ಆಶ್ರಯದಲ್ಲಿ ‘ಆಟಿದ ಕೂಟ–2026’ ಕಾರ್ಯಕ್ರಮ ಆ.11ರಂದು ಕೆವಿಜಿ ಪ್ರೌಢಶಾಲಾ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶಾಲಾ ಆವರಣದಲ್ಲಿ ನಿರ್ಮಿಸಲಾದ ಗದ್ದೆಯಲ್ಲಿ ಯುವತಿ ಮಂಡಲದ ಸದಸ್ಯರು ನೇಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬೆಳ್ಯಪ್ಪ ಗೌಡ ಪೈಕ ಅವರು ಕಳಸಿಗೆ ಭತ್ತ ಸುರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತಡ್ಕ ಅಧ್ಯಕ್ಷತೆ ವಹಿಸಿದ್ದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಮಲಾಕ್ಷ ಗೌಡ ಮುಳುಬಾಗಿಲು, ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ದಿನೇಶ್ ಹಾಲೆಮಜಲು, ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಮೂಕಮಲೆ, ಚೈತನ್ಯ ಯುವತಿ ಮಂಡಲದ ಅಧ್ಯಕ್ಷೆ ಗಾಯತ್ರಿ, ಸ್ಥಾಪಕ ಅಧ್ಯಕ್ಷೆ ಯಶೋಧ ಅಂಬೆಕಲ್ಲು, ಪ್ರಧಾನ ಕಾರ್ಯದರ್ಶಿ ಮುರಳಿ ನಳಿಯಾರು ಹಾಗೂ ಪೂರ್ವ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ ಉಪಸ್ಥಿತರಿದ್ದರು.

ಆಟಿ ತಿಂಗಳ ವಿಶೇಷತೆಯನ್ನು ಪರಿಚಯಿಸುವ ವಿವಿಧ ಚಟುವಟಿಕೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ಮಕ್ಕಳು ಹಾಗೂ ಯುವತಿ ಮಂಡಲದ ಸದಸ್ಯರು ತಯಾರಿಸಿ ತಂದಿದ್ದ 30ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ಆಟಿ ಖಾದ್ಯಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಅತ್ಯುತ್ತಮ ಖಾದ್ಯಗಳಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳು ಹಾಗೂ ಸಾರ್ವಜನಿಕರಿಗೆ ಆಟಿ ಆಚರಣೆಯ ಕುರಿತು ಭಾಷಣ ಸ್ಪರ್ಧೆ ಮತ್ತು ಸೌಹಾರ್ದಯುತ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿತ್ತು. ಅಲ್ಲದೆ, ಹಿಂದಿನ ಕಾಲದಲ್ಲಿ ದಿನನಿತ್ಯದ ಬಳಕೆಯಲ್ಲಿದ್ದ ಅಪರೂಪದ ಪುರಾತನ ವಸ್ತುಗಳ ಪ್ರದರ್ಶನವೂ ನಡೆಯಿತು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ ಯುವಜನ ಸಂಯುಕ್ತ ಮಂಡಳಿ, ಯುವಕ ಹಾಗೂ ಯುವತಿ ಮಂಡಳಿಯ ಅಧ್ಯಕ್ಷರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಶಾಲೆಯ ನಿವೃತ್ತ ಶಿಕ್ಷಕ ವೆಂಕಟರಮಣ ಗೌಡ ಕೊಪ್ಪಡ್ಕ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಹಾಲೆಮಜಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹರೀಶ್ ಬಳ್ಳಡ್ಕ ವಂದಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *