Breaking
29 Sep 2026, Tue

‘ದಕ್ಷಿಣಕನ್ನಡ’ ಐತಿಹಾಸಿಕ ಹೆಸರೇ ಉಳಿಯಲಿ: ಸರ್ಕಾರಕ್ಕೆ ಮನವಿ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಐತಿಹಾಸಿಕ ಹೆಸರನ್ನು ಬದಲಿಸಿ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲೆಯ ನಾಗರಿಕರು, ಬುದ್ಧಿಜೀವಿಗಳು, ಇತಿಹಾಸಕಾರರು, ಸಾಹಿತಿಗಳು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು, ‘ದಕ್ಷಿಣಕನ್ನಡ’ ಎಂಬ ಐತಿಹಾಸಿಕ ಹೆಸರನ್ನೇ ಮುಂದುವರಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ, ‘ದಕ್ಷಿಣಕನ್ನಡ’ ಹೆಸರನ್ನು ಉಳಿಸಬೇಕೆಂಬ ಬೇಡಿಕೆ ಮಂಗಳೂರಿನ ವಿರುದ್ಧದದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮಂಗಳೂರು ಈ ಪ್ರದೇಶದ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕೇಂದ್ರವಾಗಿದ್ದು, ತನ್ನದೇ ಆದ ವಿಶಿಷ್ಟ ಅಸ್ತಿತ್ವ ಹೊಂದಿದೆ.

‘ದಕ್ಷಿಣಕನ್ನಡ’ ಎಂಬ ಹೆಸರು ಮಂಗಳೂರನ್ನು ಮೀರಿದ ವಿಶಾಲ ಭೌಗೋಳಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರದೇಶವನ್ನು ಪ್ರತಿನಿಧಿಸುತ್ತದೆ ಎಂದು ಮನವಿದಾರರು ತಿಳಿಸಿದ್ದಾರೆ.


ದಕ್ಷಿಣಕನ್ನಡ ಜಿಲ್ಲೆಗೆ 150 ವರ್ಷಕ್ಕೂ ಮೀರಿದ ಆಡಳಿತಾತ್ಮಕ ಇತಿಹಾಸವಿದೆ.

ಈ ಪ್ರದೇಶ ಹಿಂದೆ ‘ಸೌತ್ ಕೆನರಾ’ ಅಥವಾ ‘ಸೌತ್ ಕನಾರಾ’ ಎಂದು ಕರೆಯಲ್ಪಡುತ್ತಿತ್ತು. 1977ರ ಜನವರಿಯಲ್ಲಿ ಕರ್ನಾಟಕ ಸರ್ಕಾರವು ‘ಸೌತ್ ಕನಾರಾ’ ಹೆಸರನ್ನು ‘ದಕ್ಷಿಣಕನ್ನಡ’ ಎಂದು ಬದಲಾಯಿಸಿತು. ಹೀಗಾಗಿ ಈ ಹೆಸರು ಸುಮಾರು ಐದು ದಶಕಗಳ ಐತಿಹಾಸಿಕ ನಿರಂತರತೆಯನ್ನು ಹೊಂದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲೆಯ ಕೇಂದ್ರ ಮಂಗಳೂರು ಎಂಬ ಕಾರಣಕ್ಕೆ ಜಿಲ್ಲೆಯ ಹೆಸರನ್ನೂ ಮಂಗಳೂರಿನ ಹೆಸರಿನಿಂದಲೇ ಕರೆಯಬೇಕೆಂಬ ಆಡಳಿತಾತ್ಮಕ ಅನಿವಾರ್ಯತೆ ಇಲ್ಲ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಮುಲ್ಕಿ ಸೇರಿದಂತೆ ಹಲವು ಪಟ್ಟಣಗಳು, ಗ್ರಾಮಗಳು ಹಾಗೂ ಐತಿಹಾಸಿಕ ಪ್ರದೇಶಗಳು ದಕ್ಷಿಣಕನ್ನಡದ ವಿಶಾಲ ಅಸ್ತಿತ್ವದ ಭಾಗವಾಗಿವೆ ಎಂದು ಮನವಿದಾರರು ಹೇಳಿದ್ದಾರೆ.

1997ರಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗವನ್ನು ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನು ರಚಿಸಿದ ಬಳಿಕವೂ ಉಳಿದ ಜಿಲ್ಲೆಗೆ ‘ದಕ್ಷಿಣಕನ್ನಡ’ ಎಂಬ ಹೆಸರನ್ನೇ ಮುಂದುವರಿಸಲಾಯಿತು. ಆಡಳಿತಾತ್ಮಕ ಬದಲಾವಣೆಗಳ ನಡುವೆಯೂ ಹೆಸರು ಉಳಿದುಕೊಂಡಿರುವುದು ಅದರ ಐತಿಹಾಸಿಕ ನಿರಂತರತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೆಸರು ಬದಲಾವಣೆಯಿಂದ ಐತಿಹಾಸಿಕ ದಾಖಲೆಗಳು, ಪುಸ್ತಕಗಳು, ನಕ್ಷೆಗಳು, ಶೈಕ್ಷಣಿಕ ಮತ್ತು ಆಡಳಿತಾತ್ಮಕ ದಾಖಲೆಗಳು, ಕಾನೂನು ಹಾಗೂ ಸಾಂಸ್ಕೃತಿಕ ಉಲ್ಲೇಖಗಳು ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳಲ್ಲಿ ಬದಲಾವಣೆ ಮಾಡುವ ಅಗತ್ಯ ಎದುರಾಗಬಹುದು ಎಂದು ಮನವಿಯಲ್ಲಿ ಗಮನ ಸೆಳೆಯಲಾಗಿದೆ.

ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದನ್ನು ಸ್ವಾಗತಿಸಿರುವ ಮನವಿದಾರರು, ಈ ಪ್ರಕ್ರಿಯೆಯನ್ನು ಮಂಗಳೂರು ನಗರಕ್ಕೆ ಮಾತ್ರ ಸೀಮಿತಗೊಳಿಸದೆ ಜಿಲ್ಲೆಯ ಎಲ್ಲ ತಾಲೂಕುಗಳು, ಪಟ್ಟಣಗಳು ಹಾಗೂ ಗ್ರಾಮಗಳ ಜನರ ಅಭಿಪ್ರಾಯವನ್ನೂ ಒಳಗೊಂಡಂತೆ ವ್ಯಾಪಕ ಮತ್ತು ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇತಿಹಾಸಕಾರರು, ಶಿಕ್ಷಣ ತಜ್ಞರು, ಸಾಹಿತಿಗಳು, ಸಾಂಸ್ಕೃತಿಕ ಸಂಘಟನೆಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯವನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಂಗಳೂರು ದಕ್ಷಿಣಕನ್ನಡದ ಹೃದಯಭಾಗವಾಗಿ ಉಳಿಯಲಿ; ‘ದಕ್ಷಿಣಕನ್ನಡ’ ಜಿಲ್ಲೆಗೆ ಹೆಮ್ಮೆಯ ಐತಿಹಾಸಿಕ ಹೆಸರಾಗಿ ಮುಂದುವರಿಯಲಿ ಎಂಬುದು ಮನವಿದಾರರ ಆಗ್ರಹವಾಗಿದೆ.

Leave a Reply

Your email address will not be published. Required fields are marked *