Breaking
29 Sep 2026, Tue

ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಹಣ ವರ್ಗಾವಣೆಗೆ ನೆರವು ಆರೋಪದಲ್ಲಿ ಮತ್ತಿಬ್ಬರ ಬಂಧನ

ಕಾಪು: ಪ್ರಿನ್ಸ್ ಎಂಟರ್ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ವರ್ಗಾವಣೆಗೆ ನೆರವು ನೀಡಿದ ಆರೋಪದಲ್ಲಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ.


ಬಂಧಿತರನ್ನು ಕಾಪು ತಾಲೂಕಿನ ತೆಂಕ ಗ್ರಾಮದ ನಿವಾಸಿ ಚಿರಾಗ್ ಪೂಜಾರಿ (26) ಹಾಗೂ ಎರ್ಮಾಳ್ ತೆಂಕ ನಿವಾಸಿ ಮೊಹಮ್ಮದ್ ಇರ್ಷಾದ್ (43) ಎಂದು ಗುರುತಿಸಲಾಗಿದೆ.


ಆ.7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮುದರಂಗಡಿಯ ಸೇಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್ನಲ್ಲಿ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ಬೈಕ್ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ಹಿಂಬದಿ ಕುಳಿತಿದ್ದ ವ್ಯಕ್ತಿ ಪಿಸ್ತೂಲ್ನಿಂದ ಡೇವಿಡ್ ಅವರ ತಲೆಗೆ ಗುಂಡು ಹಾರಿಸಿದ್ದ.
ಘಟನೆಗೆ ಸಂಬಂಧಿಸಿ ಶಿರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿತ್ತು. ಈಗಾಗಲೇ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರನ್ನು ಪೊಲೀಸರು ಬಂಧಿಸಿದ್ದರು.


ತನಿಖೆಯ ವೇಳೆ ಹತ್ಯೆಗೆ ಸಂಬಂಧಿಸಿದ ಹಣದ ವರ್ಗಾವಣೆಗೆ ನೆರವು ನೀಡುವ ಮೂಲಕ ಆರೋಪಿಗಳಿಗೆ ಸಹಕರಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚಿರಾಗ್ ಪೂಜಾರಿ ಹಾಗೂ ಮೊಹಮ್ಮದ್ ಇರ್ಷಾದ್ ಅವರನ್ನು ಆ.12ರಂದು ಪೊಲೀಸರು ಬಂಧಿಸಿದ್ದಾರೆ.


ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *