ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಸ್ನೇಹ ಸಂಜೀವಿನಿ ಒಕ್ಕೂಟದ ವತಿಯಿಂದ ‘ಆಟಿದ ಕೂಟ’ ಕಾರ್ಯಕ್ರಮ ಆ.11ರ ಮಂಗಳವಾರ ವೀರಕಂಭ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಒಕ್ಕೂಟದ ಅಧ್ಯಕ್ಷೆ ಕುಸುಮಾ ಶೆಟ್ಟಿ ಅವರು ಆಟಿ ತಿಂಗಳ ವಿಶೇಷತೆ, ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ಆಚರಣೆಗಳ ಕುರಿತು ಮಾಹಿತಿ ನೀಡಿದರು.

ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಗರ್ಭಕಂಠ ಕ್ಯಾನ್ಸರ್ ಕುರಿತು ಎನ್‌ಜಿಒ ಪ್ರತಿನಿಧಿ ಅಮಿತಾ ಅವರು ವಿಡಿಯೋ ಮೂಲಕ ಜಾಗೃತಿ ಮೂಡಿಸಿದರು. ರೂಪ ಅವರು ‘ಆಟಿದ ಮದಿಪು’ ಎಂಬ ವಿಷಯದಡಿ ಆಟಿ ತಿಂಗಳ ವಿಶೇಷತೆಗಳನ್ನು ವಿವರಿಸಿದರು.

ಸದಸ್ಯರಾದ ಪ್ರೇಮ ಹಾಗೂ ಗೀತಾ ನೃತ್ಯದ ಮೂಲಕ ಮನರಂಜನೆ ನೀಡಿದರು. ವೇದ ಹಾಗೂ ಗೀತಾ ಪಾರ್ದನ ಹಾಡಿದರು. ಸದಸ್ಯರು ತಮ್ಮ ಮನೆಗಳಲ್ಲಿ ತಯಾರಿಸಿದ ವಿವಿಧ ಆಟಿ ತಿಂಗಳ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ತಂದು ಪರಸ್ಪರ ಹಂಚಿಕೊಂಡು ಸವಿದರು.

ಕಾರ್ಯಕ್ರಮದ ಅಂಗವಾಗಿ ಹಿಂದಿನ ಕಾಲದಲ್ಲಿ ಬಳಕೆಯಾಗುತ್ತಿದ್ದ ವಿವಿಧ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಎಲ್‌ಸಿಆರ್‌ಪಿ ಜಯಂತಿ ಸ್ವಾಗತಿಸಿದರು. ಕೃಷಿ ಸಖಿ ನಮಿತಾ ವಂದಿಸಿದರು. ಪಶು ಸಖಿ ಪ್ರಾಚೀನಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸ್ನೇಹ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.





