ಬಂಟ್ವಾಳ: ತಾಲೂಕಿನ ರಾಯಿ ಸಮೀಪ ಬಿಸಿರೋಡು–ಮೂಡುಬಿದಿರೆ ರಸ್ತೆಗೆ ಗೋಳಿ ಮರವೊಂದು ಉರುಳಿ ಬಿದ್ದ ಪರಿಣಾಮ ಶುಕ್ರವಾರ ಬೆಳಗ್ಗೆ ಸುಮಾರು ಒಂದು ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬೆಳಗ್ಗಿನ ವೇಳೆಯಲ್ಲಿ ಪ್ರಮುಖ ರಸ್ತೆಯಲ್ಲೇ ಮರ ಬಿದ್ದಿದ್ದರಿಂದ ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವವರು ಸೇರಿದಂತೆ ವಾಹನ ಸವಾರರು ತೊಂದರೆ ಅನುಭವಿಸಿದರು. ಮರ ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಬಳಿಕ ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು ಅವರ ನೇತೃತ್ವದಲ್ಲಿ ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರ ಬಿದ್ದ ಪರಿಣಾಮ ಯಾವುದೇ ಅಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.




