Breaking
25 Sep 2026, Fri

ಪುಂಜಾಲಕಟ್ಟೆ: ಪಂಜಾಡಿಯಲ್ಲಿ ಅಕ್ರಮ ಮರಳು ದಾಸ್ತಾನು ಪತ್ತೆ; ಆರೋಪಿಗಳು ಪರಾರಿ

ಪುಂಜಾಲಕಟ್ಟೆ: ಕಾವಳಮೂಡೂರು ಗ್ರಾಮದ ಪಂಜಾಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ದಾಸ್ತಾನು ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ. 23ರಂದು ಪುಂಜಾಲಕಟ್ಟೆ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ.ವಿ. ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಪಂಜಾಡಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಬಗ್ಗೆ ಮಾಹಿತಿ ದೊರೆತಿತ್ತು. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ರಸ್ತೆ ಬದಿಯಲ್ಲಿ ಸುಮಾರು 50 ಗೋಣಿ ಚೀಲಗಳಲ್ಲಿ ಮರಳು ತುಂಬಿಸಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಸ್ಥಳದಲ್ಲಿ ಮರಳನ್ನು ರಾಶಿ ಹಾಕುತ್ತಿದ್ದ 3–4 ಮಂದಿ ಪೊಲೀಸರನ್ನು ಕಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಪರಿಶೀಲನೆ ವೇಳೆ ಸುಮಾರು 20 ಬುಟ್ಟಿಯಷ್ಟು ಮರಳು, ಎರಡು ಅಲ್ಯೂಮಿನಿಯಂ ಬಾಲ್ದಿಗಳು, ಎರಡು ಸಲಾಕೆಗಳು ಹಾಗೂ ಖಾಲಿ ಗೋಣಿ ಚೀಲಗಳು ಪತ್ತೆಯಾಗಿವೆ. ಮರಳಿನ ಅಂದಾಜು ಮೌಲ್ಯ ₹8,000, ಸಲಾಕೆಗಳ ಮೌಲ್ಯ ₹200 ಹಾಗೂ ಅಲ್ಯೂಮಿನಿಯಂ ಬಾಲ್ದಿಗಳ ಮೌಲ್ಯ ₹100 ಎಂದು ಅಂದಾಜಿಸಲಾಗಿದೆ.

ಈ ಕುರಿತು ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *