ಕುಂದಾಪುರ: ಶಾರ್ಜಾದಲ್ಲಿ ನಿಗೂಢವಾಗಿ ಮೃತಪಟ್ಟ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಸೆ.25ರಂದು ವಿಮಾನದ ಮೂಲಕ ಹುಟ್ಟೂರಿಗೆ ಬರಲಿದೆ.

ಗುರುವಾರ ರಾತ್ರಿ 11 ಗಂಟೆಗೆ ಶಾರ್ಜಾದಿಂದ ಪ್ರಕಾಶ್ ಅವರ ಸಂಬಂಧಿಕರು ಹಾಗೂ ಕಂಪೆನಿಯ ಪ್ರತಿನಿಧಿಗಳು ಪಾರ್ಥಿವ ಶರೀರದೊಂದಿಗೆ ವಿಮಾನದಲ್ಲಿ ಹೊರಟಿದ್ದು, ಶುಕ್ರವಾರ ಬೆಳಗಿನ ಜಾವ ಸುಮಾರು 4ರಿಂದ 5 ಗಂಟೆಯ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಅಲ್ವಿನ್ ಪ್ರಕಾಶ್ ಕುಂದರ್ ಅವರು ಕಳೆದ 14 ವರ್ಷಗಳಿಂದ ಶಾರ್ಜಾದ ಸಿಮನ್ಸ್ ಕಂಪೆನಿಯ ಖಾಸಗಿ ವಿಮಾನಯಾನ ಸಂಸ್ಥೆಯ ಟರ್ಮಿನಲ್–2ರಲ್ಲಿ ಹಿರಿಯ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಆ.12ರಂದು ಅಲ್ ಅಮಿನ್ ರಸ್ತೆಯ ಪಾರ್ಕಿಂಗ್ ಪ್ರದೇಶದಲ್ಲಿ ಅವರದೇ ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅವರೊಂದಿಗೆ ವಾಸವಾಗಿದ್ದ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದು ಪ್ರಕರಣದ ಕುರಿತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



