Breaking
12 Aug 2026, Wed

ಬಂಟ್ವಾಳ: ಬಿಸಿಯೂಟ ಸಿಬ್ಬಂದಿಯ ಕೈ ತುರಿಮಣೆಯಲ್ಲಿ ಸಿಲುಕಿದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಮಯಪ್ರಜ್ಞೆ ಮೆರೆದ ಬಾಲಕ

ಬಂಟ್ವಾಳ: ಬಿಸಿಯೂಟ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದ ವೇಳೆ ಸಂಭವಿಸಬಹುದಾಗಿದ್ದ ಅನಾಹುತವನ್ನು ಐದನೇ ತರಗತಿ ಬಾಲಕನೊಬ್ಬ ಸಮಯಪ್ರಜ್ಞೆಯಿಂದ ತಪ್ಪಿಸಿದ ಘಟನೆ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಚಾಲಿತ ತುರಿಮಣೆಯಲ್ಲಿ ಆಕಸ್ಮಿಕವಾಗಿ ಅವರ ಕೈಬೆರಳು ಸಿಲುಕಿಕೊಂಡಿದೆ. ಈ ವೇಳೆ ಅವರು ಕಿರುಚಿಕೊಂಡಿದ್ದು, ಶಾಲಾ ಅಂಗಳದಲ್ಲಿ ಆಟವಾಡುತ್ತಿದ್ದ ಐದನೇ ತರಗತಿ ವಿದ್ಯಾರ್ಥಿ ಮನ್ವಿತ್ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾನೆ.

ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಮನ್ವಿತ್, ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾನೆ. ಬಾಲಕನ ಸಮಯಪ್ರಜ್ಞೆಯಿಂದ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಗಿದೆ.

ಸ್ವಯಂ ನಿರ್ಧಾರದಿಂದ ಧೈರ್ಯ ಹಾಗೂ ಸಮಯಪ್ರಜ್ಞೆ ಮೆರೆದ ಬಾಲಕ ಮನ್ವಿತ್‌ನ ಕಾರ್ಯಕ್ಕೆ ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಭೇಟಿ ನೀಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ಹಾಗೂ ಸಿಆರ್‌ಪಿ ಜ್ಯೋತಿ ಅವರು ಕೂಡ ಬಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *