ಕಾಸರಗೋಡು: ಉಪ್ಪಳದ ಪೆರಿಂಗಾಡಿಯಲ್ಲಿ ಸ್ನೇಹಿತರೊಂದಿಗೆ ಕೆರೆಗೆ ಸ್ನಾನಕ್ಕೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಆ.11ರಂದು ಸಂಜೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಅಲಿ ಹಾಗೂ ಸುಲೈಖಾ ದಂಪತಿಯ ಪುತ್ರ ಅಬೂಬಕರ್ ಅಸನ್ (13) ಎಂದು ಗುರುತಿಸಲಾಗಿದೆ. ಅವರು ಮಂಗಲ್ಪಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಅಬೂಬಕರ್ ಮನೆಯ ಸಮೀಪದ ಕೆರೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದರು. ಸ್ನಾನ ಮುಗಿಸಿದ ಬಳಿಕ ಸ್ನೇಹಿತರು ಮನೆಗೆ ಮರಳಿದರೂ ಅಬೂಬಕರ್ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದಾರೆ.

ನಂತರ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಬೂಬಕರ್ ಕೆರೆಯಲ್ಲಿ ಮುಳುಗಿರುವುದು ಪತ್ತೆಯಾಗಿದೆ.
ಮಾಹಿತಿ ತಿಳಿದು ಸ್ಥಳೀಯರು ಹಾಗೂ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದು, ತಡರಾತ್ರಿ ಅಬೂಬಕರ್ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ.

ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




