Breaking
11 Nov 2026, Wed

ಹಿರಿಯ ಪತ್ರಕರ್ತ ಗೋಪಾಲ ಅಂಚನ್ ಮನೆಗೆ ಮಾಜಿ ಸಚಿವ ಬಿ. ರಮಾನಾಥ ರೈ ಭೇಟಿ

ಬಂಟ್ವಾಳ: ಕಳೆದ ಐದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಚಿಂತಕ ಆಲದಪದವು ಗೋಪಾಲ ಅಂಚನ್ ಅವರ ಮನೆಗೆ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಸೋಮವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಗೋಪಾಲ ಅಂಚನ್ ಅವರ ಆರೋಗ್ಯ ಹಾಗೂ ಚಿಕಿತ್ಸೆಯ ಕುರಿತು ಮಾಹಿತಿ ಪಡೆದ ರೈ ಮತ್ತು ಜೊತೆಗಿದ್ದ ಪ್ರಮುಖರು, ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದರು.

ಇದೇ ವೇಳೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸರಕಾರದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭ ಮಾತನಾಡಿದ ಬಿ. ರಮಾನಾಥ ರೈ ಅವರು, ಮೂರು ದಶಕಕ್ಕೂ ಹೆಚ್ಚು ಕಾಲ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಜನಜಾಗೃತಿ ಕ್ಷೇತ್ರಗಳಲ್ಲಿ ಗೋಪಾಲ ಅಂಚನ್ ಸಲ್ಲಿಸಿರುವ ಸೇವೆ ಶ್ಲಾಘನೀಯ. ಅವರ ಸಾಧನೆ ಮತ್ತು ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ನೆಲ್ಲಿಗುಡ್ಡೆ ಶ್ರೀ ಸಂಯುಕ್ತ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್, ವಾಮದಪದವು ವಲಯ ಯುವ ಬಂಟರ ಸಂಘದ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ಗಂಟಾರಬೆಟ್ಟು ಗುತ್ತು, ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಅಜ್ಜಿಬೆಟ್ಟು, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್ ಕುಮಾರ್ ನಾಯರ್ಕುಮೇರು, ಯತೀಶ್ ಶೆಟ್ಟಿ ವಿಜಯನಗರ, ಯುವ ನಾಯಕರಾದ ರಾಜೀವ ಗಟ್ಟಿ ಬಸ್ತಿಕೋಡಿ, ಸುರೇಶ್ ಶೆಟ್ಟಿ ನಂದಿಲ, ಹರೀಶ ಸಪಲ್ಯ ಆಲದಪದವು ಹಾಗೂ ಲಿಂಗಪ್ಪ ಪೂಜಾರಿ ಶ್ರೀನಿವಾಸ ನಗರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *