ಬ್ರಿಂಡೆಲ್ ಪದವು: ಇಲ್ಲಿನ ಮಹಮ್ಮಾಯಿ ದೇವಿ, ನಾಗದೇವರು ಹಾಗೂ ಗುಳಿಗ ದೈವಗಳ ಪವಿತ್ರ ಸಾನಿಧ್ಯದಲ್ಲಿ ಸುಮಾರು 20ರಿಂದ 35 ವರ್ಷಗಳ ಕಾಲ ನಿರಂತರವಾಗಿ ಭಜನಾ ಸೇವೆ ನಡೆಸಿಕೊಂಡು ಬಂದಿದ್ದ ಶ್ರೀ ಮಾತೇ ಅಂಬಾಭವಾನಿ ಭಜನಾ ಮಂಡಳಿಯ ಚಟುವಟಿಕೆಗಳು ಕಾರಣಾಂತರಗಳಿಂದ ಕಳೆದ 6–7 ವರ್ಷಗಳಿಂದ ಸ್ಥಗಿತಗೊಂಡಿದ್ದವು.

ಒಂದು ಕಾಲದಲ್ಲಿ ಮನೆಮನೆಗಳಲ್ಲಿ ಭಜನೆ ಹಾಗೂ ನಗರ ಭಜನೆಗಳ ಮೂಲಕ ಹಿರಿಯರು ಮತ್ತು ಕಿರಿಯರು ಒಟ್ಟಾಗಿ ಶ್ರದ್ಧಾಭಕ್ತಿಯಿಂದ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಭಜನಾ ಸೇವೆ ಸ್ಥಗಿತಗೊಂಡಿದ್ದಲ್ಲದೆ, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವೂ ಅಪೂರ್ಣವಾಗಿತ್ತು.

ಹಿಂದಿನ ಸಂಪ್ರದಾಯ ಮತ್ತು ಭಜನಾ ಪರಂಪರೆಯನ್ನು ಮತ್ತೆ ಮುನ್ನಡೆಸಬೇಕು, ಮನೆಮನೆಗಳಲ್ಲಿ ಭಜನೆಯ ನಾದ ಮೊಳಗಬೇಕು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂಬ ಸದುದ್ದೇಶದಿಂದ ಹಿರಿಯರು ಮತ್ತು ಯುವಕರು ಒಂದಾಗಿ ಚಿಂತನೆ ನಡೆಸಿ, ‘ಹಳೆ ಬೇರು, ಹೊಸ ಚಿಗುರು’ ಎಂಬ ಆಶಯದೊಂದಿಗೆ ಶ್ರೀ ಮಾತೇ ಅಂಬಾಭವಾನಿ ಭಜನಾ ಮಂಡಳಿಯನ್ನು ಪುನರಾರಂಭಿಸಿದರು.

ಭಜನಾ ಮಂಡಳಿಯ ಪುನರಾರಂಭದ ಅಂಗವಾಗಿ ಆಯೋಜಿಸಲಾದ ಭಜನಾ ತರಬೇತಿ ಕಾರ್ಯಕ್ರಮವನ್ನು ಭಜನಾ ತರಬೇತುದಾರ ಅಶೋಕ್ ನಾಯ್ಕ್ ಕಳಸಬೈಲು ಅವರು ಉದ್ಘಾಟಿಸಿ ತರಬೇತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅರ್ಚಕ ಗಂಗಯ್ಯ ನಾಯ್ಕ್ ಹಾಗೂ ಗಣ್ಯ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ಕೋರಿದರು. ಹಿರಿಯರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಭಜನಾ ಸೇವೆಯ ಪುನರಾರಂಭಕ್ಕೆ ವಿಶೇಷ ಮೆರುಗು ದೊರೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಜನಾ ಬಂಧುಗಳು, “ಈ ಸಾನಿಧ್ಯದ ಭಜನಾ ಸೇವೆಯೇ ನಮ್ಮ ಜೀವನಕ್ಕೆ ಉತ್ತಮ ದಾರಿಯನ್ನು ತೋರಿಸಿದೆ. ಈ ಕ್ಷೇತ್ರವನ್ನು ಹಾಗೂ ಇಲ್ಲಿ ಕಲಿತ ಭಜನಾ ಸಂಸ್ಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮುಂದೆಯೂ ಭಜನೆಯ ಮೂಲಕ ಸಾನಿಧ್ಯದ ಅಭಿವೃದ್ಧಿಗೆ ನಮ್ಮಿಂದಾದ ಸೇವೆಯನ್ನು ಸಲ್ಲಿಸುತ್ತೇವೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದು ಕೇವಲ ಒಂದು ಭಜನಾ ಮಂಡಳಿಯ ಪುನರಾರಂಭವಲ್ಲ; ಹಲವು ವರ್ಷಗಳ ಭಕ್ತಿ, ನಂಬಿಕೆ, ಪ್ರೀತಿ, ಸಂಪ್ರದಾಯ ಮತ್ತು ಒಗ್ಗಟ್ಟಿನ ಪುನರ್ಮಿಲನವಾಗಿದೆ. ಹಿರಿಯರ ಅನುಭವದೊಂದಿಗೆ ಯುವ ಪೀಳಿಗೆಯ ಉತ್ಸಾಹವೂ ಮೇಳೈಸಿ ಭಜನಾ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಭಜನಾ ತರಬೇತುದಾರ ಅಶೋಕ್ ನಾಯ್ಕ್ ಕಳಸಬೈಲು, ಅರ್ಚಕ ಗಂಗಯ್ಯ ನಾಯ್ಕ್, ಸುರೇಶ್ ನಾಯ್ಕ್ ಪೊಪಾಡಿಕಲ್ಲು, ಸುಂದರ ನಾಯ್ಕ್ ಕೋರ್ಡೆಲ್, ಹರಿಶ್ಚಂದ್ರ ನಾಯ್ಕ್ ಬ್ರಿಂಡೆಲ್ ಪದವು, ಸತ್ಯನಾರಾಯಣ ಭಜನಾ ಮಂಡಳಿ ಪುಪಾಡಿಕಲ್ಲಿನ ಅಧ್ಯಕ್ಷ ಸತೀಶ್ ಪೂಜಾರಿ ಹಾಗೂ ಸಹ ತರಬೇತುದಾರರಾದ ಶಶಾಂಕ್ ಮತ್ತು ನವ್ಯ ಉಪಸ್ಥಿತರಿದ್ದರು.

ಭಜನಾ ತರಬೇತಿಯಲ್ಲಿ ಶುಭಕರ, ಹರೀಶ್, ಸವಿನ್, ವಿನೀತ್, ಪುನೀತ್, ಪುರಂದರ ವಾಮಂಜೂರು, ಆರುಷ್, ಬಿಂದು, ನಿಹಣ್ಯ, ಲೋಚನ್, ಅನಘ್, ನೇಹಾಲ್, ಪ್ರಾಪ್ತಿ ಕೆ.ವಿ., ಪ್ರಜ್ವಲ್, ಮೋಕ್ಷಿತ್, ಆದರ್ಶ್, ಸಚಿತ್, ಸಂಕೇತ್, ಸುಮಂತ್, ಸಾರ್ಥಕ್, ತುಷಾರ್ ಹಾಗೂ ತೃಪ್ತಿ ಕೆ.ವಿ. ಸೇರಿದಂತೆ ಹಲವರು ಭಾಗವಹಿಸಿದರು.
ಹಳೆಯ ಸಂಪ್ರದಾಯವನ್ನು ಉಳಿಸಿ, ಹೊಸ ಪೀಳಿಗೆಗೆ ಭಜನೆಯ ಸಂಸ್ಕಾರವನ್ನು ಕಲಿಸುವ ಮೂಲಕ ಈ ಸಾನಿಧ್ಯ ಮತ್ತಷ್ಟು ಅಭಿವೃದ್ಧಿ ಹೊಂದಲಿ. ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಭಜನಾ ಸೇವೆ ನಿರಂತರವಾಗಿ ಮುಂದುವರಿಯಲಿ ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.


