Breaking
26 Sep 2026, Sat

ಮಣಿಪುರ: ನಾಗಾ ಗ್ರಾಮಕ್ಕೆ ದುಷ್ಕರ್ಮಿಗಳ ದಾಳಿ; 9 ಮನೆಗಳು ಬೆಂಕಿಗಾಹುತಿ

ಕಾಂಗ್‌ಪೊಕ್ಪಿ/ಇಂಫಾಲ್: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ನಾಗಾ ಗ್ರಾಮವೊಂದರ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ದಾಳಿ ನಡೆಸಿದ್ದು, 9 ಮನೆಗಳು ಹಾಗೂ ಚರ್ಚ್‌ವೊಂದು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ಬುಧವಾರ(ಆ.12) ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಟೋಕ್ಪಾ ಲಿಯಾಂಗ್‌ಮೈ ನಾಗಾ ಗ್ರಾಮದಲ್ಲಿ ಘಟನೆ ನಡೆದಿದೆ. ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಗಾಹುತಿಯಾದ ಮನೆಗಳಲ್ಲಿ ಬಹುತೇಕವು ಮಣ್ಣಿನ ಗೋಡೆ ಹಾಗೂ ಹುಲ್ಲಿನ ಛಾವಣಿ ಹೊಂದಿದ್ದ ಕಚ್ಚಾ ಮನೆಗಳಾಗಿವೆ ಎನ್ನಲಾಗಿದೆ.

ದಾಳಿ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ಸಮೀಪದ ಗ್ರಾಮಗಳ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ನೆರವಾದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಘಟನೆಯನ್ನು ಲಿಯಾಂಗ್‌ಮೈ ನಾಗಾ ಕೌನ್ಸಿಲ್ ಮಣಿಪುರ ತೀವ್ರವಾಗಿ ಖಂಡಿಸಿದ್ದು, ಮತ್ತೊಂದು ಸಮುದಾಯದ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿಯ ಹಿಂದೆ ಇದ್ದಾರೆ ಎಂದು ಆರೋಪಿಸಿದೆ.

ಮನೆಗಳು ಹಾಗೂ ಧಾರ್ಮಿಕ ಸ್ಥಳವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿರುವುದು ಗಂಭೀರ ಹಾಗೂ ಖಂಡನೀಯ ಹಿಂಸಾಚಾರ ಎಂದು ಕೌನ್ಸಿಲ್ ಹೇಳಿದೆ.

ದಾಳಿಗೆ ಹೊಣೆಗಾರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *