ಬೆಳಾಲು: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಪರಿಸರ ಸಂಘದ ಆಶ್ರಯದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಣಮ್ಯ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜೀವನಶೈಲಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಯುರ್ವೇದ ನೀಡುತ್ತಿರುವ ಕೊಡುಗೆ ಹಾಗೂ ಅದರ ಮಹತ್ವದ ಕುರಿತು ಬೆಳಕು ವಿವರಿಸಿದಳು.

ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಅವರು ರಾಷ್ಟ್ರೀಯ ಆಯುರ್ವೇದ ದಿನದ ವಿಶೇಷತೆ, ಆಯುರ್ವೇದ ಆಧಾರಿತ ಜೀವನಶೈಲಿ ಹಾಗೂ ಆಯುರ್ವೇದ ಕ್ಷೇತ್ರದ ಬೆಳವಣಿಗೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ನೀಡುತ್ತಿರುವ ಕೊಡುಗೆಗಳ ಕುರಿತು ಮಾಹಿತಿ ನೀಡಿದರು. ನಿತ್ಯ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುವ ಸರಳ ಮನೆಮದ್ದುಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಾಲೆಯ ಔಷಧೀಯ ಸಸ್ಯ ಹಾಗೂ ಹಣ್ಣು-ಹಂಪಲುಗಳ ವನಕ್ಕೆ ಭೇಟಿ ನೀಡಿ ವಿವಿಧ ಗಿಡಮೂಲಿಕೆಗಳನ್ನು ಗುರುತಿಸಿ, ಅವುಗಳ ಗುಣಧರ್ಮಗಳ ಕುರಿತು ಮಾಹಿತಿ ಪಡೆದುಕೊಂಡರು. ಆಯುರ್ವೇದದ ಮಹತ್ವ ಸಾರುವ ಜಾಗೃತಿ ಪೋಸ್ಟರ್‌ಗಳನ್ನು ಸಹ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







