ಮಾಲಾಡಿ: ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ.), ಮಾಲಾಡಿ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.26ರಂದು ಮಾಲಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಒಕ್ಕೂಟದ ಅಧ್ಯಕ್ಷೆ ರೂಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಶ್ರೀ ಗೌರಿ ಸಂಜೀವಿನಿ ಸಂಘದ ಸದಸ್ಯೆ ವನಿತಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಒಕ್ಕೂಟದ ಸಿಬ್ಬಂದಿ ಸಂಜೀವಿನಿ ಧ್ಯೇಯಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್‌ಸಿಆರ್‌ಪಿ ಶಕುಂತಳಾ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷೆ ರೂಪ, ವಲಯ ಮೇಲ್ವಿಚಾರಕ ಜಯಾನಂದ ಹಾಗೂ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ವಲಯ ಮೇಲ್ವಿಚಾರಕ ಜಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಕೆ. ಶಾರದ ಅವರು 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಒಕ್ಕೂಟದ ಕಾರ್ಯದರ್ಶಿ ಸುನಿತಾ ಐತಲ್ ಅವರು ಜಮಾ-ಖರ್ಚಿನ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಒಕ್ಕೂಟದ ನಿಯಮ-ನಿಬಂಧನೆಗಳು ಹಾಗೂ ಧ್ಯೇಯೋದ್ದೇಶಗಳ ಕುರಿತು ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ನೂತನ ಅಧ್ಯಕ್ಷೆಯಾಗಿ ತುಳಸಿ ಉಮೇಶ್, ಕಾರ್ಯದರ್ಶಿಯಾಗಿ ಅಶ್ವಿನಿ, ಉಪಾಧ್ಯಕ್ಷೆಯಾಗಿ ಖೈರುನ್ನಿಸ ಹಾಗೂ ಕೋಶಾಧಿಕಾರಿಯಾಗಿ ಜ್ಯೋತಿ ಆಯ್ಕೆಯಾದರು.

ಗ್ರಾಮ ಪಂಚಾಯತ್ ಸಿಬ್ಬಂದಿ ವಿನಯ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ಮಾತನಾಡಿ, ಗ್ರಾಮ ಪಂಚಾಯತ್ ಹಾಗೂ ಒಕ್ಕೂಟದ ಸಹಯೋಗದೊಂದಿಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ಮಹಾಸಭೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹೂಗುಚ್ಛ ಸ್ಪರ್ಧೆಯಲ್ಲಿ ಶ್ರೀದೇವಿ ಸಂಜೀವಿನಿ ಸಂಘದ ಸದಸ್ಯೆ ಪ್ರೇಮ ಪ್ರಥಮ, ಸಂಗಮ ಸಂಜೀವಿನಿ ಸಂಘದ ಸದಸ್ಯೆ ಸಾವಣ್ಯ ದ್ವಿತೀಯ ಹಾಗೂ ನವದುರ್ಗ ಸಂಜೀವಿನಿ ಸಂಘದ ಸದಸ್ಯೆ ಇಂದಿರಾ ಲಾವಣ್ಯ ತೃತೀಯ ಬಹುಮಾನ ಪಡೆದರು.
ಬಾಲ್ ಪಾಸಿಂಗ್ ಸ್ಪರ್ಧೆಯಲ್ಲಿ ಪ್ರೀತಿ ಸಂಜೀವಿನಿ ಸಂಘದ ಸದಸ್ಯೆ ಆಯುಷ ಭಾನು ಪ್ರಥಮ ಹಾಗೂ ಶ್ರೀ ಗೌರಿ ಸಂಜೀವಿನಿ ಸಂಘದ ಸದಸ್ಯೆ ವನಿತಾ ದ್ವಿತೀಯ ಬಹುಮಾನ ಪಡೆದರು. ಲಕ್ಕಿ ಮಹಿಳೆ ಆಯ್ಕೆಯಲ್ಲಿ ಭಾಗ್ಯಶ್ರೀ ಸಂಜೀವಿನಿ ಸಂಘದ ಸದಸ್ಯೆ ಸುಶೀಲ ಬಹುಮಾನ ಪಡೆದರು.

ಜೇನು ಕೃಷಿ, ಕಾಳುಮೆಣಸು ಕೃಷಿ, ಹೈನುಗಾರಿಕೆ ಹಾಗೂ ತರಕಾರಿ ಕೃಷಿಯ ಮೂಲಕ ಸ್ವಾವಲಂಬನೆ ಸಾಧಿಸುತ್ತಿರುವ ಸ್ನೇಹ ಸಂಜೀವಿನಿ ಸಂಘದ ಸದಸ್ಯೆ ಗಿರಿಜಾ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದಿಂದ ನಿರ್ಗಮಿಸುವ ಸದಸ್ಯರನ್ನು ಗೌರವಿಸಲಾಯಿತು. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಜೀವಿನಿ ಮಹಿಳೆಯರ ಮಕ್ಕಳನ್ನು, ಸ್ವಚ್ಛ ಸಂಕೀರ್ಣ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ವಲಯ ಮೇಲ್ವಿಚಾರಕ ಜಯಾನಂದ ಅವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಪೋಷಣಾ ಅಭಿಯಾನ (FNHW) ಹಾಗೂ ಲಿಂಗತ್ವ ಕಾರ್ಯಕ್ರಮ ನಡೆಯಿತು. ಸೊಣಂದೂರು ಗ್ರಾಮದ CHO ಐಶ್ವರ್ಯ ಅವರು FNHW ಕುರಿತು ಮಾಹಿತಿ ನೀಡಿದರು. ಮಾಲಾಡಿ ಉಪಕೇಂದ್ರ ಆಯುಷ್ಮಾನ್ ಆರೋಗ್ಯ ಕೇಂದ್ರದ CHOಗಳಾದ ಜಯಶ್ರೀ ಹಾಗೂ ಐಶ್ವರ್ಯ ಅವರು NCD ಶಿಬಿರ ನಡೆಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಸಂಜೀವಿನಿ ಸಂಘಗಳ ಸದಸ್ಯರು, ಅಭಿವೃದ್ಧಿ ಅಧಿಕಾರಿ, ವಲಯ ಮೇಲ್ವಿಚಾರಕರು, ಪಂಚಾಯತ್ ಸಿಬ್ಬಂದಿ, ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಒಕ್ಕೂಟದ ಸಿಬ್ಬಂದಿ ಉಪಸ್ಥಿತರಿದ್ದರು.
ಪಶು ಸಖಿ ಜ್ಯೋಲಿನ್ ಎವರಿಸ್ಟ್ ತಾವ್ರೊ ವಂದನಾರ್ಪಣೆಗೈದರು. ಶ್ರೀ ವಿನಾಯಕ ಸಂಜೀವಿನಿ ಸಂಘದ ಅಧ್ಯಕ್ಷೆ ತುಳಸಿ ಬಿ. ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.



