Breaking
29 Sep 2026, Tue

ಭಜನಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ: ರಿತಿಕಾ ಪೂಜಾರಿ, ನಿತ್ಯ ಗೌಡಗೆ ಗೌರವ ಸನ್ಮಾನ

ನರಸಿಂಹರಾಜಪುರ: ಕೆ.ಇ.ಬಿ. ಹಿಂಭಾಗದ ಸುಭಾಷ್ ನಗರದಲ್ಲಿ ಸೆ. 27ರಂದು ನಡೆದ 23ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಭಜನಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಿತಿಕಾ ಪೂಜಾರಿ ಹಾಗೂ ನಿತ್ಯ ಗೌಡ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಪುರೋಹಿತ ಜಗದೀಶ್ ಭಟ್ ಅವರು ರಿತಿಕಾ ಪೂಜಾರಿ ಅವರ ಸಾಧನೆ ಹಾಗೂ ಪ್ರಚಾರ ಕಾರ್ಯವನ್ನು ಪರಿಚಯಿಸಿ ಅಭಿನಂದಿಸಿದರು. ಬಳಿಕ ಗಣೇಶೋತ್ಸವದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ರಿತಿಕಾ ಅವರನ್ನು ಗೌರವಿಸಿದರು.


ಕಲ್ಲಮುಂಡ್ಕೂರಿನ ಗಣೇಶ್ ಹಾಗೂ ಸುರೇಖಾ ದಂಪತಿಯ ಪುತ್ರಿ ರಿತಿಕಾ ಪೂಜಾರಿ ಅವರು ಮಹಾಲಿಂಗೇಶ್ವರ ಭಜನಾ ಮಂಡಳಿ, ದೈಲಬೆಟ್ಟು, ಕಲ್ಲಮುಂಡ್ಕೂರು ಇದರ ಭಜಕಿಯಾಗಿ, ಯುವ ಬರಹಗಾರ್ತಿ ಹಾಗೂ ಪ್ರಚಾರಕಿಯಾಗಿ ಗುರುತಿಸಿಕೊಂಡಿದ್ದಾರೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಕಳೆದ ನಾಲ್ಕು ವರ್ಷಗಳಲ್ಲಿ 230ಕ್ಕೂ ಹೆಚ್ಚು ಭಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ, ಸುಮಾರು 16 ಭಜನಾ ತಂಡಗಳ ತರಬೇತಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.


ಭಜನಾ ಕಾರ್ಯಕ್ರಮಗಳು, ಭಜಕರ ಸಾಧನೆ, ಮಕ್ಕಳ ಪ್ರತಿಭೆ, ತಂಡಗಳ ಪ್ರಶಸ್ತಿ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಬರಹ ಮತ್ತು ಪ್ರಚಾರ ಕಾರ್ಯದಲ್ಲಿ ರಿತಿಕಾ ತೊಡಗಿಸಿಕೊಂಡಿದ್ದಾರೆ. 23ನೇ ವರ್ಷದ ಗಣೇಶೋತ್ಸವದ ಪ್ರಚಾರ ಕಾರ್ಯದಲ್ಲಿಯೂ ಅವರು ಸೇವೆ ಸಲ್ಲಿಸಿದ್ದರು.


ಇದೇ ಸಂದರ್ಭದಲ್ಲಿ ಕುಶಲ ಹಾಗೂ ಕೃಷ್ಣ ಗೌಡ ದಂಪತಿಯ ಪುತ್ರಿ ನಿತ್ಯ ಗೌಡ, ಸಂಪಿಗೆ, ಚಿಟ್ಟೆಮಾರು, ಪುತ್ತಿಗೆ ಅವರನ್ನು ಸಹ ಗೌರವಿಸಿ ಸನ್ಮಾನಿಸಲಾಯಿತು. ನಿತ್ಯ ಅವರು ವಿವಿಧ ಸ್ಥಳಗಳಲ್ಲಿ ಮಕ್ಕಳಿಗೆ ನೃತ್ಯ ಹಾಗೂ ಭಜನಾ ತರಬೇತಿ ನೀಡುತ್ತಿದ್ದು, ವಿವಿಧ ಕಾರ್ಯಕ್ರಮಗಳ ಪ್ರಚಾರ ಕಾರ್ಯದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.


ಈ ಮಕ್ಕಳಿಗೆ ಭಜನಾ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುತ್ತಿರುವ ಮಹಾಲಿಂಗೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣ ಕುಲಾಲ್ ಹಾಗೂ ಕಾರ್ಯದರ್ಶಿ ವಾಸು ನಾಯ್ಕ್, ಮಹಮ್ಮಾಯಿ ಸೇವಾ ಭಜನಾ ಮಂಡಳಿಯ ಅಧ್ಯಕ್ಷ ಭಾಸ್ಕರ್ ಕುಲಾಲ್ ಅವರ ಸಹಕಾರ ಮತ್ತು ಪ್ರೋತ್ಸಾಹವಿದೆ.
ಅಶೋಕ್ ನಾಯ್ಕ್ ಕಳಸಬೈಲು ಅವರ ಮಾರ್ಗದರ್ಶನದಲ್ಲಿ ಭಜನಾ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಸೇವೆಯ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡು ಗೌರವ ಸನ್ಮಾನ ಪಡೆಯುತ್ತಿರುವುದು ಗಮನಾರ್ಹವಾಗಿದೆ.

Leave a Reply

Your email address will not be published. Required fields are marked *