ಪುತ್ತೂರು: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ದರ್ಬೆ ನಿವಾಸಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಹ ಸಂಚಾಲಕ ಇಂಜಿನಿಯರ್ ಪ್ರಸನ್ನ ದರ್ಬೆ ಅವರಿಗೆ ‘ಎಮಿನೆಂಟ್ ಇಂಜಿನಿಯರ್-2026’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಸೆ.26ರಂದು ಬೆಂಗಳೂರಿನ ತಾಜ್ ಯಶವಂತಪುರದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್, ನಟಿ ಬೃಂದಾ ಆಚಾರ್ಯ, ಪರ್ವ ಗ್ರೂಪ್ ದುಬೈ ಸಂಸ್ಥಾಪಕ ನೀಲೇಶ್ ಎಚ್.ಪಿ. ಹಾಗೂ ಕನ್ನಡಪ್ರಭ–ಏಷಿಯಾನೆಟ್ ಸುವರ್ಣ ನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ ಉಪಸ್ಥಿತರಿದ್ದರು.

ಪ್ರಸನ್ನ ದರ್ಬೆ ಅವರು ಉಪ್ಪಿನಂಗಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಮತ್ತು ಡಿಪ್ಲೊಮಾ ಶಿಕ್ಷಣ ಪೂರ್ಣಗೊಳಿಸಿ, ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
2013ರಿಂದ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಲ್ಲಿ ಸೇವೆ ಸಲ್ಲಿಸಿದ್ದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕುಕ್ಕೆ ಸುಬ್ರಹ್ಮಣ್ಯ, ಹೊಸಮಠ, ಉದನೆ, ಕಡೇಶಿವಾಲ್ಯ–ಅಜಿಲಮೊಗ್ರು , ಪಾಲೋಲಿ, ಕನ್ನಡಕುದ್ರು, ಹೆಜಮಾಡಿ, ಬೆಳ್ವೆ ಸೇರಿದಂತೆ ಹಲವು ಪ್ರಮುಖ ಸೇತುವೆಗಳ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಗಳೂರು ವಿಮಾನ ನಿಲ್ದಾಣದ ಎಕ್ಸಿಟ್ ರಸ್ತೆ ವಿನ್ಯಾಸದಲ್ಲಿಯೂ ಕಾರ್ಯನಿರ್ವಹಿಸಿದ್ದರು.

2018ರಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ತಾತ್ಕಾಲಿಕ ನಗರ ನಿರ್ಮಾಣದ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ಅವರು, ಸರ್ಕಾರ ಹಾಗೂ ಜೈನ ಮಠದಿಂದ ಸನ್ಮಾನಕ್ಕೆ ಪಾತ್ರರಾಗಿದ್ದರು.
2019ರಲ್ಲಿ ಸರ್ಕಾರಿ ಸೇವೆಗೆ ರಾಜೀನಾಮೆ ನೀಡಿ ಸ್ವಂತ ಸಂಸ್ಥೆ ಸ್ಥಾಪಿಸಿದ ಅವರು, ಪ್ರಸ್ತುತ ಕರ್ನಾಟಕ ಸರ್ಕಾರದ ಎಂಪನ್ನೆಲ್ಡ್ ಸ್ಟ್ರಕ್ಚರಲ್ ಕನ್ಸಲ್ಟೆಂಟ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವು ಸರ್ಕಾರಿ ಕಟ್ಟಡಗಳು ಮತ್ತು ಸೇತುವೆಗಳ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪುತ್ತೂರಿನ ಮಹಿಳಾ ಕಾಲೇಜು, ಜಿಲ್ಲಾ ಮುಖ್ಯ ನ್ಯಾಯಾಲಯ, ನ್ಯಾಯಾಧೀಶರ ವಸತಿಗೃಹಗಳು ಹಾಗೂ ಸುಳ್ಯ, ಪುತ್ತೂರು, ಮಂಗಳೂರು, ದೇರಳಕಟ್ಟೆ ಸೇರಿದಂತೆ ವಿವಿಧೆಡೆ ನಿರ್ಮಾಣವಾಗಿರುವ ನಿರೀಕ್ಷಣಾ ಭವನಗಳ ವಿನ್ಯಾಸದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿರುವ ಪ್ರಸನ್ನ ದರ್ಬೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅವರು, ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.



