Breaking
29 Sep 2026, Tue

ಕೇಪು ವಲಯದ 10 ಒಕ್ಕೂಟಗಳ ಪದಗ್ರಹಣ; ಗ್ರಾಮಾಭಿವೃದ್ಧಿಗೆ ಒತ್ತು

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕೇಪು ವಲಯದ 10 ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಸೆ. 27ರಂದು ಕನ್ಯಾನದ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ನಡೆಯಿತು.


ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಪು ವಲಯದ ಅಧ್ಯಕ್ಷ ಗಣೇಶ್ ಮೈರುಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಕಣಿಯೂರಿನ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಪ್ರತಿಯೊಂದು ಗ್ರಾಮವೂ ಅಭಿವೃದ್ಧಿ ಹೊಂದುವುದು ಅಗತ್ಯ. ಈ ನಿಟ್ಟಿನಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಜನರ ಅಭಿವೃದ್ಧಿಗಾಗಿ ರೂಪಿಸಿರುವ ದೂರದೃಷ್ಟಿಯ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.


ಶ್ರೀ ಗುರುದೇವ ದತ್ತ ಸಂಸ್ಥಾನಂ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಅವರು ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಆಶೀರ್ವಚನ ನೀಡಿದರು. ಧರ್ಮಸ್ಥಳ ಹಾಗೂ ಒಡಿಯೂರು ಸಂಸ್ಥೆಗಳ ಮೂಲಕ ನಡೆಯುತ್ತಿರುವ ವಿವಿಧ ಯೋಜನೆಗಳು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಒಂದೇ ದೇಹದ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದರು.


ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆ–2ರ ನಿರ್ದೇಶಕ ಬಾಬು ನಾಯ್ಕ ಅವರು ಯೋಜನೆಯ ಮೂಲಕ ದೊರೆಯುವ ವಿವಿಧ ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಅಡ್ಯಂತಾಯ, ಪದ್ಯಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ, ಜನಜಾಗೃತಿ ವಲಯದ ಅಧ್ಯಕ್ಷ ರಾಧಾಕೃಷ್ಣ ಚೆಲ್ಲಡ್ಕ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷ ನವೀನ್ ಚಂದ್ರ, ವಿನೋದ್ ಶೆಟ್ಟಿ ಪಟ್ಲಗುತ್ತು, ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಬಳಿಕ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬೇಡಗುಡ್ಡೆ ಒಕ್ಕೂಟದ ಅಧ್ಯಕ್ಷ ಮೋಹನ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಚಂದ್ರಶೇಖರ್ ವರದಿ ವಾಚಿಸಿದರು. ಶಿರಾಂಕಲ್ಲು ಒಕ್ಕೂಟದ ನೂತನ ಅಧ್ಯಕ್ಷ ಸಂತೋಷ್ ಕುಮಾರ್ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *