Breaking
29 Sep 2026, Tue

ಸಂವಿಧಾನಬದ್ಧ ಹಕ್ಕುಗಳ ಸಂರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ: ಚಂದ್ರಪ್ಪ ಮದ್ದಡ್ಕ

ಬೆಳ್ತಂಗಡಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 80 ವರ್ಷಗಳಾದರೂ ಸಂವಿಧಾನಬದ್ಧ ಹಕ್ಕುಗಳು ಹಾಗೂ ಸವಲತ್ತುಗಳನ್ನು ಸಂರಕ್ಷಿಸಿಕೊಳ್ಳಲು ಸಂಘಟಿತರಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಉಪನ್ಯಾಸಕ ಹಾಗೂ ನಿರೂಪಕ ಚಂದ್ರಪ್ಪ ಮದ್ದಡ್ಕ ಕರೆ ನೀಡಿದರು.

ಅವರು ಭಾನುವಾರ ಕುಕ್ಕೇಡಿ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ವತಿಯಿಂದ ಆಯೋಜಿಸಿದ್ದ ‘ಮೀಸಲಾತಿ ಮತ್ತು ಸಂವಿಧಾನ ಸಂರಕ್ಷಣೆ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿದ್ದ ದಲಿತ ಸಮುದಾಯದ ಹಲವು ಸಮಸ್ಯೆಗಳು ಇಂದಿಗೂ ಸಂಪೂರ್ಣವಾಗಿ ಬದಲಾಗಿಲ್ಲ. ಶಿಕ್ಷಣ, ಉದ್ಯೋಗ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತ ಸಮುದಾಯಕ್ಕೆ ಸಂವಿಧಾನ ಬೆನ್ನೆಲುಬಾಗಿ ನಿಂತಿದೆ.

ಸಂವಿಧಾನವನ್ನು ಹಂತ ಹಂತವಾಗಿ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಧ್ವನಿ ಎತ್ತದಂತೆ ಧರ್ಮದ ಚೌಕಟ್ಟಿನಲ್ಲಿ ತಡೆಯುವ ಪ್ರಯತ್ನಗಳು ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

ನಮ್ಮ ಹಕ್ಕುಗಳು ಹಾಗೂ ಸವಲತ್ತುಗಳನ್ನು ಸಂರಕ್ಷಿಸುವುದರ ಜೊತೆಗೆ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಸಂಘಟಿತರಾಗಿ ಹೋರಾಟ ನಡೆಸುವ ಅಗತ್ಯ ಹಿಂದಿಗಿಂತಲೂ ಹೆಚ್ಚಾಗಿದೆ ಎಂದು ಚಂದ್ರಪ್ಪ ಮದ್ದಡ್ಕ ಹೇಳಿದರು.

ವಿಚಾರ ಸಂಕಿರಣದಲ್ಲಿ ‘ಮೀಸಲಾತಿ ಮತ್ತು ವರ್ತಮಾನದ ಸವಾಲು’ ಹಾಗೂ ‘ಸಂವಿಧಾನ ಸಂರಕ್ಷಣೆಯಲ್ಲಿ ಯುವಜನರ ಪಾತ್ರ’ ವಿಷಯಗಳ ಕುರಿತು ಪತ್ರಕರ್ತ ಹಾಗೂ ಚಿಂತಕ ಶ್ರೀರಾಮ ದಿವಾನ, ಯುವ ಪತ್ರಕರ್ತೆ ಯೋಗಿನಿ ಮಚ್ಚಿನ, ನಿವೃತ್ತ ಪ್ರಾಧ್ಯಾಪಕ ಸೋಮಪ್ಪ ಅಳಂಗಾರು ಹಾಗೂ ಡಾ. ವಾಸುದೇವ ಬೆಳ್ಳೆ ಮಾತನಾಡಿದರು.

ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಅಧ್ಯಕ್ಷ ಸುಂದರ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷ ವಿಜಯ ಕುಮಾರ್ ಬಜಿರೆ ಹಾಗೂ ದಸಂಸ (ಅಂಬೇಡ್ಕರ್ ವಾದ) ಕುಕ್ಕೇಡಿ–ನಿಟ್ಟಡೆ ಗ್ರಾಮ ಸಮಿತಿ ಸಂಚಾಲಕ ಹರೀಶ್ ಪಂಡಿಜೆ ಉಪಸ್ಥಿತರಿದ್ದರು.

ಶಿಕ್ಷಕ ಸುಕೇಶ್ ಮಾಲಾಡಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ವಿನಯ್ ಕುಮಾರ್ ಉಜಿರೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿ ಕೋಶಾಧಿಕಾರಿ ಶಿವಾನಂದ ಪಡಂಗಡಿ, ನಾರಾವಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಸದಾಶಿವ ವೇಣೂರು, ಅಳದಂಗಡಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಸತೀಶ್ ಸುಲ್ಕೇರಿಮೊಗ್ರು, ಲಾಯಿಲ ಜಿಲ್ಲಾ ಪಂಚಾಯತ್ ಉಸ್ತುವಾರಿ ಎಲ್. ಹರೀಶ್ ಕುಮಾರ್, ಉಜಿರೆ ಜಿಲ್ಲಾ ಪಂಚಾಯತ್ ಉಸ್ತುವಾರಿ ನಾರಾಯಣ ಪುದುವೆಟ್ಟು, ಕುವೆಟ್ಟು ಜಿಲ್ಲಾ ಪಂಚಾಯತ್ ಉಸ್ತುವಾರಿ ಪ್ರಶಾಂತ್ ಮದ್ದಡ್ಕ, ಧರ್ಮಸ್ಥಳ ಜಿಲ್ಲಾ ಪಂಚಾಯತ್ ಉಸ್ತುವಾರಿ ಶ್ರೀಧರ್ ಕಳೆಂಜ, ಕಣಿಯೂರು ಜಿಲ್ಲಾ ಪಂಚಾಯತ್ ಉಸ್ತುವಾರಿ ಗಣೇಶ್ ಕಣಿಯೂರು ಹಾಗೂ ಸಮಿತಿಯ ಗೌರವ ಸಲಹೆಗಾರರಾದ ಒಬಯ್ಯ ಆರಂಬೋಡಿ, ಪರಮೇಶ್ವರ ಅಂಡಿಂಜೆ, ಕೂಸ ಅಳದಂಗಡಿ, ಸಂಜೀವ ದೇವರಗುಡ್ಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಪದಾಧಿಕಾರಿಗಳಾದ ಶೇಖರ್ ವಿ.ಜಿ ವೇಣೂರು, ಚರಣ್ ರಾಜ್ ಕುಕ್ಕೇಡಿ, ಅವಿನಾಶ್ ಕುರ್ತೊಡಿ, ಯತೀಶ್ ಧರ್ಮಸ್ಥಳ, ರಂಜಿತ್ ಧರ್ಮಸ್ಥಳ, ಶೇಖರ್ ವಿ ಧರ್ಮಸ್ಥಳ, ಪ್ರವೀಣ್ ಸೂರ್ಯ ಹೊಸಂಗಡಿ, ವೇಣೂರು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *