Breaking
29 Sep 2026, Tue

ಬಿ.ಸಿ.ರೋಡು ಚಲೋ: ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಗೆ ಖಂಡನೆ

ಬಂಟ್ವಾಳ: ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸುವ ಕ್ರಮ ಖಂಡಿಸಿ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮತ್ತು ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಬಿ.ಸಿ.ರೋಡಿನಲ್ಲಿ ‘ಬಿ.ಸಿ.ರೋಡು ಚಲೋ’ ಪ್ರತಿಭಟನಾ ಸಭೆ ನಡೆಯಿತು.


ಬಿ.ಸಿ.ರೋಡು ರಕ್ತೇಶ್ವರಿ ಸನ್ನಿಧಿ ಬಳಿ ನಡೆದ ಸಭೆಯಲ್ಲಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, “ಕರಾವಳಿಯಲ್ಲಿ ಸಂಘಟಿತರಾಗಿರುವ ಹಿಂದೂ ಸಮಾಜವನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದ್ದು, ಪೊಲೀಸರ ಮೂಲಕ ಅನಗತ್ಯ ಪ್ರಕರಣ ದಾಖಲಿಸಿ, ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕವೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಜೈಲಿಗಟ್ಟುವ ಮೂಲಕ ದಮನಕಾರಿ ನೀತಿ ಅನುಸರಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ” ಎಂದು ಎಚ್ಚರಿಸಿದರು.


ಸಾವಿರಾರು ಮಂದಿಗೆ ಸುಸಂಸ್ಕೃತ ಶಿಕ್ಷಣ ನೀಡಿ ದೇಶಭಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಅದರ ಹಿಂದಿರುವ ಶಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು. ಪೊಲೀಸ್ ಇಲಾಖೆ ಯಾರದ್ದೋ ಅಣತಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.


‘ಓಲೈಕೆ ರಾಜಕಾರಣಕ್ಕೆ ಹೆಚ್ಚು ಬಾಳಿಕೆ ಇಲ್ಲ’
ಹಿಂದೂ ಜಾಗರಣ ವೇದಿಕೆ ಪ್ರಾಂತ ಸಹಸಂಯೋಜಕ ಸತೀಶ್ ದಾವಣಗೆರೆ ದಿಕ್ಕೂಚಿ ಭಾಷಣ ಮಾಡಿದರು.
“ಓಲೈಕೆ ರಾಜಕಾರಣಕ್ಕಾಗಿ ಬೇರೆ ರಾಜ್ಯದಿಂದ ಬಂದ ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಸದೃಢ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ನೋಟಿಸ್ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗದೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿದಾಗ ಮಾತ್ರ ಪೊಲೀಸ್ ಇಲಾಖೆಯ ಬಗ್ಗೆ ಸಮಾಜದಲ್ಲಿ ಗೌರವ ಉಳಿಯುತ್ತದೆ” ಎಂದು ಹೇಳಿದರು.


ಈಗಾಗಲೇ ಪುತ್ತೂರು ಚಲೋ ನಡೆದಿದ್ದು, ಇದೀಗ ಬಿ.ಸಿ.ರೋಡು ಚಲೋ ನಡೆಸಲಾಗಿದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ನೀತಿ ಮುಂದುವರಿದರೆ ಎಸ್ಪಿ ಕಚೇರಿ ಚಲೋ ನಡೆಸಲಾಗುವುದು ಎಂದು ಎಚ್ಚರಿಸಿದರು.
ವರ್ಗಾವಣೆ ಭೀತಿ ಅಥವಾ ರಾಜಕಾರಣಿಗಳ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ. ಇಂತಹ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೂ ಸಮಸ್ಯೆ ತಂದೊಡ್ಡಬಹುದು ಎಂದು ಅವರು ಹೇಳಿದರು.


ಗೂಂಡಾ ಕಾಯ್ದೆ ಹಿಂಪಡೆಯಲು ಆಗ್ರಹ
ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಹಾಗೂ ವಿಹಿಂಪ–ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್ ಮಾತನಾಡಿ, “ಕೃತ್ಯದಲ್ಲಿ ಭಾಗಿಯಾಗದಿದ್ದರೂ ಹಿಂದೂ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆ ಬಳಸಲಾಗಿದೆ. ಈ ಕ್ರಮವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ವಿಹಿಂಪ ಬಂಟ್ವಾಳ ತಾಲೂಕು ಅಧ್ಯಕ್ಷ ವಕೀಲ ಪ್ರಸಾದ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು. ಭಾಸ್ಕರ ರಾವ್ ಬಿ.ಸಿ.ರೋಡು ಪ್ರೇರಣಾ ಗೀತೆ ಹಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ನಡೆಯಿತು.


ಆರ್ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮತ್ತು ಡಾ. ಕಮಲ ಪ್ರಭಾಕರ ಭಟ್ ದಂಪತಿ, ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿ, ಭಾಗೀರಥಿ ಮುರುಳ್ಯ, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ವಿಕಾಸ್ ಪುತ್ತೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಆರ್. ಚೆನ್ನಪ್ಪ ಕೋಟ್ಯಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆಶಿಕ್ ಮಾಡೂರು, ಪ್ರವೀಣ್ ಬಸ್ತಿ ಹಾಗೂ ಅರ್ಜುನ್ ಮಾಡೂರು ಕಾರ್ಯಕ್ರಮ ನಿರೂಪಿಸಿದರು.


ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ, ನಗರ ಹಾಗೂ ಸಂಚಾರಿ ಠಾಣೆ ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪೊಲೀಸರು ಪಥಸಂಚಲನ ನಡೆಸಿದರು.


ಜನಪ್ರತಿನಿಧಿಗಳ ವಿರುದ್ಧವೂ ಅಸಮಾಧಾನ
ಕಾರ್ಯಕ್ರಮದ ಬಳಿಕ ಸತೀಶ್ ದಾವಣಗೆರೆ ಅವರ ಭಾಷಣದ ಕೆಲವೊಂದು ಹೇಳಿಕೆಗಳ ಕುರಿತು ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು.
“ಅವಿಭಜಿತ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಬೆಂಬಲದಿಂದ ಸುಲಭವಾಗಿ ಗೆದ್ದು ಶಾಸಕ–ಸಂಸದರಾಗುವ ಜನಪ್ರತಿನಿಧಿಗಳು, ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಅದೇ ಹಿಂದೂ ಸಮಾಜ ನಿಮ್ಮ ವಿರುದ್ಧವೂ ತಿರುಗಿ ಬೀಳಬಹುದು” ಎಂಬ ಅರ್ಥದ ಹೇಳಿಕೆಯನ್ನು ಸತೀಶ್ ದಾವಣಗೆರೆ ತಮ್ಮ ಭಾಷಣದಲ್ಲಿ ನೀಡಿದ್ದರು.

Leave a Reply

Your email address will not be published. Required fields are marked *