ಪುತ್ತೂರು: ವಿವಾಹದ ಭರವಸೆ ನೀಡಿ ಯುವತಿಗೆ ವಂಚಿಸಿದ ಆರೋಪ ಹೊತ್ತಿರುವ ಮಗನಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದ ಪುತ್ತೂರಿನ ಶ್ರೀಕೃಷ್ಣ ಜೆ. ರಾವ್ ನ ತಂದೆ ಪಿ.ಜಿ. ಜಗನ್ನಿವಾಸ ರಾವ್ ಗೆ ಹೈಕೋರ್ಟ್ ನಲ್ಲಿ ಬಹುದೊಡ್ಡ ಗೆಲುವು ಸಿಕ್ಕಿದೆ.

ಕಳೆದ ಜೂನ್ ತಿಂಗಳಲ್ಲಿ ಯುವತಿಯೊಬ್ಬಳು ಶ್ರೀಕೃಷ್ಣ ಜೆ. ರಾವ್ ವಿವಾಹದ ಭರವಸೆ ನೀಡಿ ಯುವತಿಗೆ ವಂಚಿಸಿದ್ದಾನೆ ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಕೃಷ್ಣ ತಲೆಮರೆಸಿಕೊಂಡಿದ್ದ. ಈ ವೇಳೆ ತಲೆಮರೆಸಿಕೊಂಡ ಮಗನಿಗೆ ಆಶ್ರಯ ನೀಡಿದ್ದಾರೆ ಎಂಬ ಕಾರಣಕ್ಕೆ ತಂದೆ ಪಿ.ಜಿ. ಜಗನ್ನಿವಾಸ ರಾವ್ ಸೇರಿದಂತೆ ಒಟ್ಟು ಮೂವರ ಮೇಲೆ ಪೊಲೀಸರು ಬಿಎನ್ಎಸ್ ಸೆಕ್ಷನ್ 249 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ವೇಳೆ ಹೈಕೋರ್ಟ್ ನ ಮೆಟ್ಟಿಲೇರಿದ್ದ ತಂದೆ ಜಗನ್ನಿವಾಸ ರಾವ್ ಅವರು ತಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ ಮತ್ತು ಇದನ್ನು ರದ್ದುಪಡಿಸಬೇಕು ಎಂದು ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಯಾವುದೇ ಭದ್ರವಾದ ಅಥವಾ ಸ್ಪಷ್ಟವಾದ ಸಾಕ್ಷ್ಯಧಾರಗಳಿಲ್ಲದೆ ಕೇವಲ ತಂದೆ ಎಂಬ ಕಾರಣಕ್ಕೆ ಪ್ರಕರಣದಲ್ಲಿ ಭಾಗಿಯಾಗಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ಮುಂದಿನ ವಿಚಾರಣೆಯವರೆಗೆ ತನಿಖೆಗೆ ಬ್ರೇಕ್ ಹಾಕಿದೆ.
ಆರೋಪಿ ಜಗನ್ನಿವಾಸ ರಾವ್ ಪರವಾಗಿ ಹಿರಿಯ ವಕೀಲರಾದ ಪಿ.ಪಿ. ಹೆಗ್ಡೆ ಅವರು ವಾದ ಮಂಡಿಸಿದ್ದರು.








