Breaking
22 Mar 2026, Sun

ಅಬ್ದುಲ್ ರಹೀಮನ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ನೀಡಲು ಎಸ್.ಕೆ.ಎಸ್.ಎಸ್.ಎಫ್ ದ.ಕ. ಈಸ್ಟ್ ಜಿಲ್ಲೆ ಸಮಿತಿ ಒತ್ತಾಯ

ಪುತ್ತೂರು: ಬಂಟ್ವಾಳ ತಾಲೂಕಿನ ಕೊಳತಮಜಲು ಎಂಬಲ್ಲಿನ ಅಬ್ದುಲ್ ರಹೀಂ ಎಂಬ ಆಮಾಯಕ ಕೂಲಿ ಕಾರ್ಮಿಕನನ್ನು ದುಷ್ಟ ಶಕ್ತಿಗಳು ಅತ್ಯಂತ ಕ್ರೂವಾಗಿ ಹತ್ಯೆ ಮಾಡಿದ್ದು, ಅಮಾಯಕ ಅಬ್ದುಲ್ ರಹೀಮನ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ನೀಡಬೇಕು. ಕರಾವಳಿಯ ಈ ಘಟನೆಗೆ ಪೋಲೀಸ್ ಇಲಾಖೆಯ ವೈಫಲ್ಯ ಮತ್ತು ನಿರ್ಲಕ್ಷ್ಯ ಸ್ಪಷ್ಟವಾಗಿದ್ದು ಸರಕಾರವು ಕರಾವಳಿ ಪೊಲೀಸ್ ಇಲಾಖೆಯಲ್ಲಿ ಶೀಘ್ರದಲ್ಲೇ ಆಮೂಲಾಗ್ರ ಬದಲಾವಣೆ ತರಬೇಕು ಎಂದು ಎಸ್.ಕೆ.ಎಸ್.ಎಸ್.ಎಫ್ ದ.ಕ. ಈಸ್ಟ್ ಜಿಲ್ಲೆ ಸಮಿತಿ ಆಗ್ರಹಿಸಿದೆ.

ಈ ಕುರಿತು ಪುತ್ತೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಅವರು ದ.ಕ ಜಿಲ್ಲೆಯಲ್ಲಿ ಕೋಮು ಪ್ರೇರಿತ ಕೊಲೆಗಳ ಸರಣಿ ಮುಂದುವರಿಯುತ್ತಿದ್ದು, ಇದು ಸಾರ್ವಜನಿಕರನ್ನು ಭಯಭೀತರಾಗಿಸಿದೆ. ಜನ ಸಾಮಾನ್ಯರ ವಿಶೇಷವಾಗಿ ದಿನಕೂಲಿ ಕೆಲಸ ಮಾಡಿ ಬದುಕುವವರ ಬದುಕಿನ ದಾರಿಯನ್ನು ಇದು ಕುಸಿಯುತ್ತಿದೆ ಎಂದು ಆರೋಪಿಸಿದರು.

ಕಾನೂನಿನ ಭಯವಿಲ್ಲದೆ ಕೋಮುವಾದಿ ಶಕ್ತಿಗಳು ನಿರಂತರ ದ್ವೇಷ ಭಾಷಣಗಳನ್ನು ನಡೆಸುತ್ತಿರುವುದರ ಪರಿಣಾಮ ಫಲವಾಗಿ ರಹೀಮನ ಹತ್ಯೆ ನಡೆದಿದೆ. ಈ ದುಷ್ಕೃತ್ಯದ ಕೊಲೆಗಾರರು ಮತ್ತು ಸಂಚು ರೂಪಿಸಿದವರು ಮತ್ತು ಪ್ರಚೋದನಕಾರಿ ಭಾಷಣ ನಡೆಸಿದವರನ್ನು ಅತಿ ಕ್ಷಿಪ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಎಸ್.ಕೆ.ಎಸ್.ಎಸ್.ಎಫ್. ಸಂಘಟನೆಯು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಿದೆ ಎಂದರು.

ಮೃತ ಅಬ್ದುಲ್ ರಹೀಂ ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡು ಬದುಕಿದಂತಹ ವ್ಯಕ್ತಿಯಾಗಿದ್ದು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವನಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಐನೂರರಷ್ಟು ಮೊಹಲ್ಲಾಗಳಿಗೆ ನೇತೃತ್ವ ನೀಡುತ್ತಿರುವ ಎಸ್.ಕೆ.ಎಸ್.ಎಸ್.ಎಫ್. ಎನ್ನುವ ಧಾರ್ಮಿಕ ಯುವಜನ ಸಂಘಟನೆಯ ಕಾರ್ಯಕರ್ತ ಮತ್ತು ಸ್ಥಳೀಯ ಮೊಹಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ನಿರ್ವಹಿಸುತ್ತಿದ್ದ ಜೊತೆಗೆ, ತನ್ನ ಪಾಡಿಗೆ ದುಡಿದು ಕುಟುಂಬ ಸಾಕುತ್ತಿದ್ದ. ಎಲ್ಲಾ ಧರ್ಮೀಯರೊಂದಿಗೆ ಸೌಹಾರ್ದಯುತ ಸಂಬAಧ ಹೊಂದಿದ್ದ ಅಮಾಯಕ ಅಬ್ದುಲ್ ರಹೀಂ ಕುಟುಂಬಕ್ಕೆ ಸರಕಾರದ ವತಿಯಿಂದ ಗರಿಷ್ಠ ಪರಿಹಾರ ಧನ ತಕ್ಷಣ ಮಂಜೂರು ಮಾಡುವಂತೆ ಸರಕಾರವನ್ನು ಆಗ್ರಹಿಸುತ್ತಿದ್ದೇವೆ.

ಜಿಲ್ಲೆಯಲ್ಲಿ ಕಾನೂನಿನ ಭಯವಿಲ್ಲದೆ ಕೋಮು ದ್ವೇಷ ಭಾಷಣ ಮಾಡುವವನನ್ನು ಕೂಡಲೇ ಬಂಧಿಸಬೇಕು. ಈ ದುಷ್ಕೃತ್ಯದ ಕೊಲೆಗಾರರು ಮತ್ತು ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮ ಕ್ಷಿಪ್ರವಾಗಿ ಜರಗಿಸಬೇಕು. ಈ ಸರಕಾರದ ಮೇಲೆ ನಮಗೆ ವಿಶ್ವಾಸವಿತ್ತು. ಆದರೆ ಅದು ಈಗ ದೂರವಾಗುತ್ತಿದೆ. ಗೃಹ ಸಚಿವರನ್ನು ತಕ್ಷಣ ಬದಲಾವಣೆ ಮಾಡಬೇಕು ಎಂದು ಎಸ್.ಕೆ.ಎಸ್.ಎಸ್.ಎಫ್ ದ.ಕ. ಈಸ್ಟ್ ಜಿಲ್ಲೆ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ, ಕಾರ್ಯದರ್ಶಿ ಅಶ್ರಫ್ ಮುಕ್ವೆ, ಕೋಶಾಧಿಕಾರಿ ಜಮಾಲ್ ಕೋಡಪದವು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *