ಕಾರ್ಕಳ: ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಲ್ಲಿನ ಗಡ್ಡೆಯನ್ನು ಹೊರತೆಗೆಯುವ ಸಂದರ್ಭ ವಿಪರೀತ ರಕ್ತಸ್ರಾವವಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ಸಂಬಂಧಿಸಿದ್ದು ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಜುಬೇದಾ(54) ಎಂಬವರು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಸಾಣೂರಿನ ಕ್ಲಿನಿಕ್ ಗೆ ತಪಾಸಣೆ ಮಾಡಿಸಿದಾಗ ಹೊಟ್ಟೆಯಲ್ಲಿ ಗಡ್ಡೆ ಬೆಳೆದಿರುವುದು ಗೊತ್ತಾಗಿ, ಶಸ್ತ್ರಚಿಕಿತ್ಸೆ ನಡೆಸುವಂತೆ ಅಲ್ಲಿನ ವೈದ್ಯರು ಶಿಫಾರಸ್ಸು ಮಾಡಿದ್ದರು. ಈ ಹಿನ್ನೆಲೆ ಜುಬೇದಾ ಅವರನ್ನು ಮೇ.15ರಂದು ಕಾರ್ಕಳದ ಸ್ಪಂದನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿನ ಗಡ್ಡೆ ಹೊರತೆಗೆಯಲು ಯತ್ನಿಸಿದಾಗ ವಿಪರೀತ ರಕ್ತಸ್ರಾವವಾಗಿದೆ. ಆ ಬಳಿಕ ಜುಬೇದಾ ಮೃತಪಟ್ಟಿದ್ದಾರೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.

ಘಟನೆಯಿಂದ ಆಘಾತಗೊಂಡ ಕುಟುಂಸ್ಥರು ವೈದ್ಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮಹಿಳೆಯ ಸಾವು ಸಂಭವಿಸಿದೆ ಎಂದು ಆರೋಪಿಸಿ ಸ್ಥಳೀಯರ ಜೊತೆಗೂಡಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.



