ಪುತ್ತೂರು: ಆರು ವರ್ಷದ ಹಿಂದೆ ತಾಯಿಯನ್ನು ಹತ್ಯೆಗೈದ ಆರೋಪಿ ಮಗನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜೈಲುಶಿಕ್ಷೆಗೆ ಒಳಗಾದ ಆರೋಪಿ ಕಡಬ ತಾಲೂಕಿನ ಕ್ಯಾಮಣ ಗ್ರಾಮ ನಿವಾಸಿ ಗೋಪಾಲ ಯಾನೆ ಗೋಪ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
2019ರ ಫೆ.15 ರಂದು ಆರೋಪಿ ಗೋಪಾಲ ಯಾನೆ ಗೋಪ ಎಂಬವರು ರಾತ್ರಿ ವೇಳೆ ತನ್ನ ತಾಯಿ ಚೀಂಕುರು ಅವರೊಂದಿಗೆ ಜಗಳವಾಡಿ ಎಲೆ ಅಡಿಕೆ ಹುಡಿಮಾಡುವ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಬಳಿಕ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ 2019ರ ಫೆ.19 ರಂದು ಅವರು ಮೃತಪಟ್ಟಿದ್ದರು.

ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿಗೆ 5 ವರ್ಷ ಜೈಲುಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಜೈಲುಶಿಕ್ಷೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದೆ.



