ಬೆಂಗಳೂರು: ನಗರದ ಹೊರವಲಯದ ಬೊಮ್ಮಸಂದ್ರದಲ್ಲಿ ಪಿಜಿಯೊಂದರಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಬೊಮ್ಮಸಂದ್ರದ ನಾಗರಾಜ್ ರೆಡ್ಡಿ ಅವರಿಗೆ ಸೇರಿದ 18 ಕೊಠಡಿಗಳಿರುವ ಪಿಜಿಯನ್ನು ಲಿಂಗರಾಜು ಅವರಿಗೆ ಲೀಸ್‌ಗೆ ನೀಡಲಾಗಿತ್ತು. ಈ ಪಿಜಿಯಲ್ಲಿ ಉತ್ತರ ಭಾರತದ ಕಾರ್ಮಿಕರು ಸೇರಿದಂತೆ 10ಕ್ಕೂ ಹೆಚ್ಚು ಅನ್ಯರಾಜ್ಯದವರು ವಾಸವಾಗಿದ್ದರು.

ಇಂದು ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ನಿವಾಸಿಗಳು ಎದ್ದು ಕೊಠಡಿಯಲ್ಲಿ ಲೈಟ್ ಆನ್ ಮಾಡುತ್ತಿದ್ದಂತೆಯೇ ಸಿಲಿಂಡರ್ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಸ್ಫೋಟದ ತೀವ್ರತೆಗೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯ ಕೈಗೊಂಡಿದ್ದಾರೆ.

ಘಟನೆ ಕುರಿತು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.


