ಬೆಂಗಳೂರು: ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಪುತ್ರನೊಬ್ಬ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ತಂದೆಯನ್ನೇ ಹತ್ಯೆಗೈದ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನೇಪಾಳ ಮೂಲದ ಚಂದ್ರು ಬಹದ್ದೂರು (58) ಮೃತಪಟ್ಟವರಾಗಿದ್ದು, ಕೃತ್ಯ ಎಸಗಿದ ಪುತ್ರ ದ್ರೋಣ ಬಹದ್ದೂರು (38) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 19ರಂದು ರಾತ್ರಿ ಸುಮಾರು 9 ಗಂಟೆಗೆ ವರ್ತೂರಿನ ಟ್ರೆಂಡ್ಸ್ ಸೆಕ್ಯೂರ್ ಅಪಾರ್ಟ್‌ಮೆಂಟ್‌ನ ಕಾರ್ಮಿಕರ ಶೆಡ್‌ನಲ್ಲಿ ಈ ಘಟನೆ ನಡೆದಿದೆ.

ತಂದೆ-ಮಗ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇಬ್ಬರೂ ವರ್ತೂರಿನ ಟ್ರೆಂಡ್ಸ್ ಸೆಕ್ಯೂರ್ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿನ ಕಾರ್ಮಿಕರ ಶೆಡ್‌ನಲ್ಲೇ ವಾಸವಾಗಿದ್ದರು.

ಭಾನುವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಮದ್ಯದ ಅಮಲಿನಲ್ಲಿ ಕೆಲಸದ ವಿಚಾರವಾಗಿ ತಂದೆ-ಮಗನ ನಡುವೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿದ ವೇಳೆ ದ್ರೋಣ ಬಹದ್ದೂರು ಕಬ್ಬಿಣದ ರಾಡ್‌ನಿಂದ ತಂದೆ ಚಂದ್ರು ಬಹದ್ದೂರು ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ.

ಗಂಭೀರವಾಗಿ ಗಾಯಗೊಂಡ ಚಂದ್ರು ಅವರನ್ನು ಸಹೋದ್ಯೋಗಿಗಳು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.

ಘಟನೆಯ ಸಂಬಂಧ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದ್ರೋಣ ಬಹದ್ದೂರನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.


