Breaking
21 Jul 2026, Tue

ಮ್ಯಾಟ್ರಿಮೋನಿ ಮೂಲಕ ಪರಿಚಯ; ಮದುವೆ ನಂಬಿಸಿ ₹87 ಲಕ್ಷ ವಂಚನೆ

ಬೆಳ್ತಂಗಡಿ: ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿದ್ದ ಯುವತಿಯೊಬ್ಬಳು ಬೆಳ್ತಂಗಡಿಯ ಉದ್ಯಮಿಯೊಬ್ಬರಿಂದ ₹87 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಕೊಯ್ಯೂರು ಗ್ರಾಮದ 36 ವರ್ಷದ ಉದ್ಯಮಿಗೆ 2024ರ ಮೇ ತಿಂಗಳಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಅನಿಷಾ ಪಾಲನ್ನ (35) ಎಂಬ ಯುವತಿಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಇನ್‌ಸ್ಟಾಗ್ರಾಂ ಹಾಗೂ ಮೊಬೈಲ್ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಮದುವೆ ಕುರಿತು ಮಾತುಕತೆ ನಡೆಸುತ್ತಿದ್ದರು.

ಈ ನಡುವೆ ವ್ಯವಹಾರದಲ್ಲಿ ತೊಂದರೆ ಉಂಟಾಗಿದೆ ಎಂದು ಹೇಳಿದ ಆರೋಪಿ, ವಿವಿಧ ವ್ಯಕ್ತಿಗಳ ಬ್ಯಾಂಕ್ ಖಾತೆಗಳು, ತನ್ನ ಬ್ಯಾಂಕ್ ಖಾತೆ ಹಾಗೂ ಗೂಗಲ್ ಪೇ ಮೂಲಕ ಹಂತ ಹಂತವಾಗಿ ಹಣ ವರ್ಗಾಯಿಸಿಸಿಕೊಂಡಿದ್ದಾಳೆ. ಅಲ್ಲದೆ, ಬೆಂಗಳೂರಿನಲ್ಲಿ ತನ್ನ ಪರವಾಗಿ ಬಂದ ವ್ಯಕ್ತಿಯ ಮೂಲಕವೂ ಲಕ್ಷಾಂತರ ರೂಪಾಯಿ ನಗದು ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಒಟ್ಟು ₹87 ಲಕ್ಷ ಪಡೆದ ಬಳಿಕ ಆರೋಪಿ ಮೊಬೈಲ್ ಸಂಪರ್ಕಕ್ಕೂ ಸಿಗದೆ, ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾಳೆ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 78/2026 ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(4) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *