Breaking
21 Jul 2026, Tue

ನೀಟ್ ಪ್ರತಿಭಟನೆ ಹತ್ತಿಕ್ಕಿರುವುದನ್ನು ಖಂಡಿಸಿದ ಆದಿವಾಸಿ ಹಕ್ಕುಗಳ ಸಮಿತಿ; ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

ಬೆಳ್ತಂಗಡಿ: ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ವೈಫಲ್ಯ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯನ್ನು ಹತ್ತಿಕ್ಕಿರುವುದನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಘಟಕ ಖಂಡಿಸಿದೆ.

ನೀಟ್ ಸೇರಿದಂತೆ ಪರೀಕ್ಷಾ ವೈಫಲ್ಯದ ವಿರುದ್ಧ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ನ್ಯಾಯಯುತ ಪ್ರತಿಭಟನೆಯನ್ನು ಹತ್ತಿಕ್ಕಿ, ವಿದ್ಯಾರ್ಥಿ ಚಳವಳಿಯ ಮೇಲೆ ನಡೆದ ಪೈಶಾಚಿಕ ದಾಳಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಆಡಳಿತಕ್ಕೆ ಸಾಕ್ಷಿ. ಇದು ದೇಶದ ಸಂವಿಧಾನಬದ್ಧ ಹಕ್ಕುಗಳ ಮೇಲಿನ ದಾಳಿ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ದೇಶದಲ್ಲಿ ತುಘಲಕ್ ಸಾಮ್ರಾಜ್ಯ ಕಾಲದ ಸರ್ಕಾರವನ್ನು ನಡೆಸುತ್ತಿದೆ. ಜರ್ಮನ್ ನ ಸರ್ವಾಧಿಕಾರಿ ಹಿಟ್ಲರ್ ನ ಸರ್ವಾಧಿಕಾರ ಆಡಳಿತವನ್ನು ಜಾರಿ ಮಾಡುತ್ತಿದ್ದು, ಅದರ ಮುಂದುವರಿದ ಭಾಗವಾಗಿ ವಿದ್ಯಾರ್ಥಿ ಯುವಜನರು ನಡೆಸುತ್ತಿದ್ದ ಶಿಕ್ಷಣ, ಉದ್ಯೋಗದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿದ್ದ ನ್ಯಾಯಯುತ ಹೋರಾಟದ ಮೇಲೆ ಪೈಶಾಚಿಕ ದಾಳಿ ನಡೆಸಿ, ಸಂವಿಧಾನಬದ್ದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದೆ‌.

ದೇಶದ ಸಂವಿಧಾನದ ಮೇಲೆ ನಡೆದ ಘನಘೋರ ಅತ್ಯಾಚಾರವಾಗಿದೆ. ನೀಟ್ ಪರೀಕ್ಷಾ ವೈಫಲ್ಯದಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಕೇಂದ್ರ ಸರ್ಕಾರ ನಡೆಸಿದ ಬೀಭತ್ಸ ಕೊಲೆಯಾಗಿದೆ. ಇದರ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು, ತಪ್ಪಿದಲ್ಲಿ ಈ ಹೋರಾಟ ದೇಶದಲ್ಲಿ ಮತ್ತಷ್ಟು ಬಲಶಾಲಿಯಾಗಬಹುದು. ಮುಂದಿನ ದಿನಗಳಲ್ಲಿ ಈ ಹೋರಾಟ ದೇಶದ ಎರಡನೇ ಸ್ವಾತಂತ್ರ್ಯ ಹೋರಾಟವಾಗುತ್ತದೆ.

ಈಗಾಗಲೇ ಈ ಹೋರಾಟಕ್ಕೆ ದೇಶದ ವಿಪಕ್ಷಗಳು ನೈತಿಕ ಬೆಂಬಲ ಘೋಷಿಸಿದ್ದು ಆಶಾದಾಯಕ ಬೆಳವಣಿಗೆ. ಮುಂದಿನ ದಿನಗಳಲ್ಲಿ ಈ ಹೋರಾಟದಲ್ಲಿ ವಿದ್ಯಾರ್ಥಿ, ಯುವಜನರ ಜೊತೆಗೆ ರೈತ, ಕಾರ್ಮಿಕರು ಸೇರಿದಂತೆ ದೇಶದ ಸರ್ವಾಧಿಕಾರಿ ಧೋರಣೆಯ ಆಡಳಿತವನ್ನು ವಿರೋಧಿಸುವವರು ಜೊತೆಯಾಗುತ್ತಾರೆ ಎಂಬ ವಿಶ್ವಾಸವಿದೆ. ಮುಂದಾಗುವ ಅನಾಹುತಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಇದರ ಸಂಚಾಲಕರಾದ ಶೇಖರ ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *