ಸುಳ್ಯ: ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಮಾವ, ಅತ್ತೆ ಹಾಗೂ ನಾದಿನಿ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿದೆ.

ಮೃತರನ್ನು ಫಾತಿಮತ್ ನಿಶಾನ ಎಂದು ಗುರುತಿಸಲಾಗಿದೆ. ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ ಅವರ ಪುತ್ರಿಯಾಗಿರುವ ಫಾತಿಮತ್ ನಿಶಾನ ಅವರನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ಸುಳ್ಯ ನಿವಾಸಿಯೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ಬಳಿಕ ಪತಿಯ ಮನೆಯಲ್ಲಿ ವಾಸವಿದ್ದ ಅವರಿಗೆ ಕೌಟುಂಬಿಕ ಕಾರಣಗಳಿಂದ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಪ್ರಕಾರ, ಜುಲೈ 18ರ ರಾತ್ರಿ ಫಾತಿಮತ್ ನಿಶಾನ ಅವರು ತಮ್ಮ ತಾಯಿಗೆ ಕರೆ ಮಾಡಿ, ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಅವರು ತಮಗೆ ಕಿರುಕುಳ ನೀಡುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು. ಈ ವೇಳೆ ಮಾವ ಮೊಬೈಲ್ ಫೋನ್ ಕಸಿದುಕೊಂಡು, “ನಿನ್ನ ಮಗಳನ್ನು ಕೊಲೆ ಮಾಡುತ್ತೇನೆ” ಎಂದು ತಾಯಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಇದರಿಂದ ಆತಂಕಗೊಂಡ ತಾಯಿ ತಕ್ಷಣವೇ ಮಗಳ ಮನೆಗೆ ತೆರಳಿದರೂ, ಅಲ್ಲಿಗೆ ತಲುಪುವಷ್ಟರಲ್ಲಿ ಫಾತಿಮತ್ ನಿಶಾನ ಮೃತಪಟ್ಟಿರುವುದು ಕಂಡುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಾವ, ಅತ್ತೆ ಹಾಗೂ ನಾದಿನಿ ಸೇರಿ ತನ್ನ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಜುಬೈದಾ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತೆಯ ತಾಯಿ ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸರು ಆರೋಪಿಗಳಾದ ಅಲವಿ, ಆಯಿಷ ಹಾಗೂ ಫಸೀಲಾ ವಿರುದ್ಧ ಅಪರಾಧ ಸಂಖ್ಯೆ 100/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 85, 103(1) ಹಾಗೂ 3(5) ರಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.


