Breaking
17 Jul 2026, Fri

ಕುಂಬ್ಳೆ: ನಾಪತ್ತೆಯಾಗಿದ್ದ 48 ವರ್ಷದ ಮಹಿಳೆ ಕೆರೆಯಲ್ಲಿ ಶವವಾಗಿ ಪತ್ತೆ

ಕುಂಬ್ಳೆ: ಕುಂಬ್ಳೆ ಸಮೀಪದ ಮುಜುಂಗಾವು ಪ್ರದೇಶದಲ್ಲಿ ನಾಪತ್ತೆಯಾಗಿದ್ದ 48 ವರ್ಷದ ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ.


ಮೃತರನ್ನು ಸೀತಾಂಗೋಳಿಯ ಎಡನಾಡ್ ಬ್ಯಾಂಕ್ ಸಮೀಪದ ನಿವಾಸಿ ರಾಮಕೃಷ್ಣ ಅವರ ಪತ್ನಿ ಎಂ. ಸುನೀತಾ (48) ಎಂದು ಗುರುತಿಸಲಾಗಿದೆ.


ಕುಟುಂಬದವರ ಮಾಹಿತಿ ಪ್ರಕಾರ, ಬುಧವಾರ ರಾತ್ರಿ ಮಲಗಿದ್ದ ಸುನೀತಾ ಅವರು ಗುರುವಾರ ಬೆಳಿಗ್ಗೆ ಮನೆಯಲ್ಲಿ ಕಾಣಿಸಿರಲಿಲ್ಲ. ಕುಟುಂಬಸ್ಥರು ಸುತ್ತಮುತ್ತ ವ್ಯಾಪಕವಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.


ಪೊಲೀಸರ ತನಿಖೆ ನಡೆಯುತ್ತಿದ್ದ ವೇಳೆ ಗುರುವಾರ ಸಂಜೆ ಮುಜುಂಗಾವು ದೇವಸ್ಥಾನದ ಸಮೀಪದ ಕೆರೆಯಲ್ಲಿ ಮಹಿಳೆಯ ಶವ ತೇಲುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಮಾಹಿತಿ ತಿಳಿದು ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವನ್ನು ಹೊರತೆಗೆದರು.


ಬಳಿಕ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಕುರಿತು ಕುಂಬ್ಳೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *